ಸ್ಟೇಟಸ್ ಕತೆಗಳು (ಭಾಗ ೫೮೦) - ನಿರ್ದೇಶಕ
ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ್ನು ವ್ಯಕ್ತಪಡಿಸಬೇಕು, ಮಾತನಾಡಬೇಕು, ಹಾಡುಬೇಕು ಕುಣಿಯಬೇಕು. ಇದೆಲ್ಲ ನಿರ್ದೇಶಕರ ಯೋಚನೆ. ಆದರೂ ನಾಟಕ ಸರಿಯಾಗದ ಕಾರಣ ನಿರ್ದೇಶಕರಿಗೆ ತುಂಬಾ ನೋವಾಗ್ತಾ ಇತ್ತು .ಮತ್ತೆ ಕರೆದು ಸರಿ ಮಾಡುವುದಕ್ಕೆ ತಿಳಿಸುತ್ತಿದ್ದ, ಆದರೆ ಮುಂದುವರಿದ ಹಾಗೆ ಅದು ಸರಿಯೇ ಆಗುವುದಿಲ್ಲ ಅಂತ ಅಂದಾಗ ಅದನ್ನ ಬಿಟ್ಟು ಸುಮ್ಮನೆ ಕುಳಿತು ಏನಾದರೂ ಆಗಲಿ ದೂರದಿಂದ ನೋಡುತ್ತಿದ್ದ. ಈ ನಿರ್ದೇಶಕರ ವಿಚಾರ ಇಲ್ಲಿ ಯಾಕೆ ಬಂತು ಅಂದ್ರೆ ನೀನು ಹಲವು ಸಮಯದಿಂದ ಕಳೆದುಕೊಂಡಿರುವ ಯಾವುದೋ ಒಂದೆರಡು ವಿಚಾರಗಳನ್ನು ಮನಸ್ಸಲ್ಲಿಟ್ಟುಕೊಂಡು ಅನುಭವಿಸಿರುವ ನೋವುಗಳನ್ನು ಮನಸ್ಸಿಗೆ ತುಂಬಿಕೊಂಡು ಅದೇ ಭಾವದಲ್ಲಿ ಜೀವಿಸ್ತಾ ಇದ್ದೀಯ. ಈ ಭಗವಂತ ನಿನ್ನ ಪಾತ್ರವನ್ನು ಸೃಷ್ಟಿಸಿ ನಿನಗೊಂದು ರಂಗ ವೇದಿಕೆಯನ್ನು ಕಲ್ಪಿಸಿ ನಿನ್ನ ಜೊತೆಗೆ ಸಹಪಾತ್ರಗಳನ್ನು ಸೃಷ್ಟಿಸಿ ಬಿಟ್ಟಿದ್ದಾನೆ. ನೀನು ಜೀವನಪೂರ್ತಿ ಒಂದೇ ಪಾತ್ರದ ಜೊತೆಗೆ ವ್ಯವಹರಿಸುವುದಲ್ಲ ಹೊಸ ಪಾತ್ರಗಳ ಜೊತೆ ಸಂವಹಣೆ ನಡೆಸಬೇಕು. ಅವುಗಳ ಜೊತೆ ಬದುಕಬೇಕು .ಆ ಭಗವಂತ ನೀನು ಯಾವ ತರಹದ ಪಾತ್ರವನ್ನು ನಟಿಸಬೇಕು ಅನ್ನೋದನ್ನು ನಿರ್ಧರಿಸಿರುತ್ತಾರೆ . ಅದನ್ನ ಬಿಟ್ಟು ನಿನಗೆ ಇಷ್ಟ ಬಂದ ತರಹ ಮಾಡ್ತಾ ಹೋದ್ರೆ ಆ ಭಗವಂತನಿಗೂ ನೋವಾಗುತ್ತೆ ಅಲ್ವಾ? ನಿನ್ನ ಪಾತ್ರವನ್ನು ಸರಿಯಾಗಿದೆ ನಿಭಾಯಿಸುವುದನ್ನು ಕಲಿತುಕೋ " ಇದು ನನ್ನ ಅಪ್ಪ ನನ್ನ ಬಳಿ ಹತ್ತಕ್ಕಿಂತ ಹೆಚ್ಚು ಸಲ ಹೇಳಿದ ಮಾತು. ವಿಚಾರ ಇನ್ನೂ ಮನಸ್ಸಿನೊಳಗೆ ಇಳಿಯುತ್ತಾ ಇದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ