ಸ್ಟೇಟಸ್ ಕತೆಗಳು (ಭಾಗ ೬೦೬) - ಸ್ಥಿತಿ
ಆ ಸಂಭ್ರಮವು ತುಂಬಿದೆ. ಸುತ್ತ ಜನ ಸೇರಿದ್ದಾರೆ ಮಗ ಪ್ರೀತಿಯಿಂದ ತಾಯಿಯ ಬಾಯಿಗೆ ಸಿಹಿ ತಿನಿಸುತ್ತಿದ್ದಾನೆ. ಬಂದವರೆಲ್ಲರೂ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಾರೆ. ಆಗಮಿಸಿದ ಪ್ರತಿಯೊಬ್ಬರಿಗೂ ಹೊಟ್ಟೆ ತುಂಬ ಊಟ ವಿಧವಿಧದ ಉಡುಗೊರೆಗಳನ್ನ ಕೊಡುಗೆಯಾಗಿ ನೀಡಲಾಯಿತು. ಬಂದವರೆಲ್ಲರೂ ಆಶೀರ್ವಾದ ಮಾಡಿದರು ಹರಸಿದರು. ಇಂತಹ ಮಗನನ್ನು ಪಡೆದದ್ದಕ್ಕೆ ಧನ್ಯ ಎಂದರು. ಆ ಸುದ್ದಿ ಟಿವಿಯಲ್ಲಿ ಪ್ರಸಾರವಾಯಿತು. ದಿನಪತ್ರಿಕೆಗಳು ಅದನ್ನ ಅಚ್ಚು ಹಾಕಿ ಇಡೀ ರಾಜ್ಯದ ತುಂಬೆಲ್ಲ ಹರಡಿದವು. ಅಮ್ಮನ ಕಣ್ಣಂಚಲ್ಲಿ ಕಣ್ಣೀರು ಜಿನುಗುತ್ತಿತ್ತು. ಬೆಳಗ್ಗೆ ಆರಂಭವಾದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾತ್ರಿ ಮುಕ್ತಾಯವಾಯಿತು. ತಾಯಿಗೆ ಆ ದಿನ ಮನೆಯಲ್ಲಿ ಮಲಗುವಾಗ ಕಣ್ಣೀರು ಬೇಡವೆಂದರೂ ಜಾರುತ್ತಿತ್ತು. ಮರುದಿನ ಮುಂಜಾನೆ ಮತ್ತೆ ಬ್ಯಾಗನ್ನು ತುಂಬಿಸಿ ತಾಯಿ ಮತ್ತೆ ಹೊರಡಬೇಕಾದ ಅನಿವಾರ್ಯ ಸ್ಥಿತಿ. ಮನೆಯವರು ಕೈ ಬೀಸಿದರು. ಆಶ್ರಯ ಅನಾಥಾಶ್ರಮದ ಗಾಡಿ ತಾಯಿಯನ್ನು ಕುಳ್ಳಿರಿಸಿಕೊಂಡು ತನ್ನ ತವರುಮನೆಗೆ ಹೊಗೆಯುಗುಳುತ್ತಾ ಸಾಗುತ್ತಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ