ಸ್ಟೇಟಸ್ ಕತೆಗಳು (ಭಾಗ ೬೦೭) - ಹೆಜ್ಜೆ

ಸ್ಟೇಟಸ್ ಕತೆಗಳು (ಭಾಗ ೬೦೭) - ಹೆಜ್ಜೆ

ಅಲ್ಲಿ ಕನಸುಗಳು ಹೇರಳವಾಗಿ ತುಂಬಿದಾವೆ, ಆ ಕನಸುಗಳ ಜೊತೆ ಒಂದಷ್ಟು ಒಂದಷ್ಟು ಸ್ಪೂರ್ತಿ ಹೊಸತನಗಳು ಎಲ್ಲವೂ ಸೇರಿಕೊಂಡು ದೂರದ ಊರಿಗೆ ಮನೆ ಬಿಟ್ಟು ಹೊರಟಿದ್ದಾನೆ. ಈಗಷ್ಟೇ ಶಿಕ್ಷಣದ ಮೊದಲ ಹಂತ ದಾಟಿಬಿಟ್ಟಿದೆ ಭವಿಷ್ಯದ ಭದ್ರತೆಗೆ ನೆಲೆ ಸಿಗಬಹುದೆಂಬ ನಿಟ್ಟಿನಲ್ಲಿ ನಂಬಿಕೆಯಿಂದ ಕಾಲೇಜೊಂದರ ಒಳಗೆ ಕಾಣಿಸಿದ್ದಾನೆ. ಅಲ್ಲಿ ಗೆಳೆತನವಾಯಿತು, ಜಗಳವಾಯಿತು, ಪ್ರೀತಿಯಾಯಿತು, ಸಂಬಂಧವಾಯಿತು, ಹೊಸ ಪರಿಚಯವೂ ಆಯ್ತು. ಈ ಎಲ್ಲ ಬಾಂಧವ್ಯಗಳನ್ನ ಜೊತೆಗಿಟ್ಟುಕೊಂಡು ತನ್ನ ಕನಸುಗಳನ್ನು ನೆನಪಿಟ್ಟುಕೊಂಡು ಹೋಗುತ್ತಿದ್ದಾನೆ. ಹಾಗೆ ಹೋಗುತ್ತಿರುವ ದಾರಿಯಲ್ಲಿ ಜೊತೆಗಿದ್ದವರು ಒಂದೊಂದು ದಾರಿಯನ್ನು ಆಯ್ದುಕೊಂಡಿದ್ದಾರೆ. ಕೆಲವರಿಗೆ ಹವ್ಯಾಸಗಳು ಬದುಕಾಯಿತು. ಆದರೆ ಕೆಲವರಿಗೆ ಅಭ್ಯಾಸಗಳು ಬದುಕು, ಇನ್ನೂ ಕೆಲವರಿಗೆ ಚಟಗಳ ಜೀವನವಾಗುತ್ತಾ ಹೋಯಿತು. ಕನಸುಗಳೆಲ್ಲ ಮೂಲೆಗೆ ಸರಿದು, ಆ ಕ್ಷಣದ ಬದುಕೇ ಅದ್ಭುತ ಅನ್ನಿಸತೊಡಗಿತ್ತು. ಆದರೆ ಅವನಿಗೆ ಒಂದಿನವು ಈ ಯೋಚನೆ ಬರಲಿಲ್ಲ. ಯಾಕೆಂದರೆ ಅಲ್ಲಿ ಮನೆಯಲ್ಲಿ ದಿನದ ಒಂದು ಹೊತ್ತಿನ ಊಟಕ್ಕೂ ಮುಂದೆ ಹಿಂದೆ ನೋಡುವ ಪರಿಸ್ಥಿತಿ ,ಮರೆತರೆ ಮುಂದೊಂದು ದಿನ ಮನೆಯವರನ್ನೆ ಮರೆತು ಬಿಡಬೇಕಾದ ಸ್ಥಿತಿ ನಿರ್ಮಾಣ ಆಗುತ್ತೆ ಅನ್ನೋದರ ಅರಿವಿದೆ. ಓದಿದ್ದಾನೆ ಸತತ ಪರಿಶ್ರಮ ನಿರಂತರ ಅಭ್ಯಾಸದಿಂದ ದೊಡ್ಡ ಹುದ್ದೆಯ ಬಾಗಿಲೊಂದು ತೆರೆದುಬಿಟ್ಟಿದೆ. ಹೆಜ್ಜೆಯೊಳಗಿರಿಸುವುದು ಇನ್ನೊಂದಷ್ಟು ಹೊಸ ಅವಕಾಶಗಳಿಗೆ ಎದುರು ನೋಡುವುದೋ ಅನ್ನೋದು ಗೊತ್ತಾಗದೆ ಹಾಗೆ ಬಾಗಿಲಲ್ಲಿ ನಿಂತುಬಿಟ್ಟಿದ್ದಾನೆ. ದೊಡ್ಡ ಕನಸುಗಳು ಅದ್ಭುತವಾದ ಬದುಕಿಗೆ ಇನ್ನೊಂದಷ್ಟು ಓದಿನ ಕಡೆಗೆ ಹೋಗಬೇಕೋ ಅಥವಾ ದುಡಿಮೆಯ ಕಡೆಗೆ ತಿರುಗಬೇಕೋ ಆಯ್ಕೆ ಅವನ ಕೈಯಲ್ಲಿದೆ. ನಿಂತು ಯೋಚಿಸುತ್ತಿದ್ದಾನೆ ಭವಿಷ್ಯದ ಭದ್ರತೆಗೆ ಸದ್ಯದ ಜೀವನ ಅಪಾಯಕ್ಕೆ ತಳ್ಳಲು ಮನಸಾಗದೆ ಒಳಕ್ಕಡಿ ಇಡುವ ಯೋಚನೆ ಮಾಡಿದ್ದಾನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇವತ್ತೇ ದೊರಕಿದರೆ ಬದುಕಲ್ಲೇನು ಹೊಸತನವಿದೆ? ಬಂದದ್ದನ್ನ ಎದುರಿಸುವ ದಿಶೆಯಲ್ಲಿ ಯೋಚನೆಗಳು ಸಾಗ್ತಾ ಇದ್ದಾವೆ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ