ಸ್ಟೇಟಸ್ ಕತೆಗಳು (ಭಾಗ ೬೦) - ಪದಕ
ಚಿನ್ನ, ಬೆಳ್ಳಿ ,ಕಂಚುಗಳು ಬೇರೆಬೇರೆಯಾಗಿ ಕರಗುತ್ತಿವೆ. ಅಲ್ಲೇ ಮೂಲೆಯಲ್ಲಿ ಕಬ್ಬಿಣವೂ ಕೂಡ ಕಾದು ನೀರಾಗುತ್ತಿದೆ. ಇವೆಲ್ಲವನ್ನು ತಾಳಿಕೊಳ್ಳಲೇ ಬೇಕು. ಬಿಸಿಯನ್ನು ಅರ್ಧದಲ್ಲಿ ನಿಲ್ಲಿಸುವ ಹಾಗಿಲ್ಲ. ಘನವು ದ್ರವವಾಗಲೇ ಬೇಕು ಯಾಕೆಂದರೆ ರೂಪ ಪಡೆದುಕೊಳ್ಳಲು. ಅವುಗಳಿಗೂ ಗೊತ್ತಿದೆ ತಾವು ಏರುತ್ತಿರುವ ಕೊರಳು, ಅಲಂಕರಿಸುವ ಕೊರಳು ಸಾಮಾನ್ಯವಾದುದಲ್ಲ. ಚಿನ್ನ ಬೆಳ್ಳಿ ಕಂಚುಗಳು ಕಬ್ಬಿಣದೊಂದಿಗೆ ಮಿಶ್ರಣವಾಗಿ ತನ್ನದೇ ವಿನ್ಯಾಸವನ್ನು ಪಡೆದುಕೊಂಡು, ಬಿಸಿ ಇರುವಾಗಲೇ ಪ್ರಬುದ್ಧ ರೂಪವೊಂದನ್ನು ಪಡೆದು ತಂಪಾಗಿ ಕಾಯುತ್ತಿವೆ...
ಅದೇ ಸಮಯಕ್ಕೆ ಬೇರೆ ಬೇರೆ ದೇಶದ ಕ್ರೀಡಾಂಗಣದಲ್ಲಿ ಅಭ್ಯಾಸ ಮಂದಿರದಲ್ಲಿ ಎಷ್ಟೋ ವರ್ಷಗಳಿಂದ ಪ್ರಯತ್ನಪಡುತ್ತಿರುವ ಮನಸ್ಸುಗಳು ಬೆವರನ್ನು ಇಳಿಸಿಕೊಂಡು ದೇಹವನ್ನು ದಂಡಿಸಿಕೊಂಡು ಅಭ್ಯಾಸ ಮುಂದುವರೆಸಿದ್ದಾವೆ. ಎಲ್ಲರ ಗುರಿಯೊಂದೆ ಅಲ್ಲಿ ತಯಾರಾದ ಪದಕ ತಮ್ಮ ಕೊರಳನ್ನ ಅಲಂಕರಿಸಬೇಕು. ಪದಕವು ಸುಲಭದಲ್ಲಿ ಒಲಿಯುವುದಿಲ್ಲ. ಯಾರ ಪರಿಶ್ರಮ ಹೆಚ್ಚಿದೆಯೋ ,ಪ್ರಯತ್ನ ಮುಂದುವರಿದಿದೆಯೇ ಅವರ ಕೊರಳಲ್ಲಿ ಏರಲು ಕಾಯುತ್ತಿದೆ. ಏರಿದ ಪದಕಗಳೆಲ್ಲವೂ ಸಂಭ್ರಮದಿ ಮಿನುಗುತ್ತಿವೆ. ತಾವು ಬಿಸಿಯಾಗಿ ಕರಗಿ ಪ್ರಬುದ್ಧ ರೂಪ ಪಡೆದುಕೊಂಡದ್ದಕ್ಕೆ ನೆಮ್ಮದಿಯ ಉಸಿರು ಬಿಡುತ್ತಿವೆ. ತಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲಕ್ಕೆ ಗೆಲುವನ್ನಪ್ಪಿಕೊಂಡರು, ಸಂಭ್ರಮದೊಂದಿಗೆ ಮುಂದಿನ ವರ್ಷವೂ ಇದನ್ನು ಉಳಿಸಿಕೊಳ್ಳುವ ನಂಬಿಕೆಯೊಂದಿಗೆ ಉಸಿರಾಡುತ್ತಿದ್ದಾರೆ. ಎರಡು ಉಸಿರುಗಳು ತಮಗೆ ಸಿಕ್ಕ ಪ್ರತಿಫಲಕ್ಕೆ ಒಬ್ಬರನ್ನೊಬ್ಬರು ಭೇಟಿಯಾಗಿ ನಗುತ್ತಾ ಮಾತುಕತೆ ಮುಂದುವರಿಸಿದ್ದಾವೆ.
-ಧೀರಜ್ ಬೆಳ್ಳಾರೆ
ಇಂಟರ್ನೆಟ್ ಚಿತ್ರ ಕೃಪೆ