ಸ್ಟೇಟಸ್ ಕತೆಗಳು (ಭಾಗ ೬೧೪) - ಹೀಗೆ

ಸ್ಟೇಟಸ್ ಕತೆಗಳು (ಭಾಗ ೬೧೪) - ಹೀಗೆ

ರಸ್ತೆ ಮೇಲಿನ ಡಾಂಬರುಗಳು ಕಿತ್ತು ಹೋಗಲು ಪ್ರಾರಂಭವಾಗಿದೆ, ಹಾಕಿದ್ದ ದೊಡ್ಡ  ಫ್ಲೆಕ್ಸ್ ಗಳು ಬಣ್ಣ ಕಳೆದುಕೊಳ್ಳುತ್ತಿವೆ, ಕೆಲವೊಂದು ಬಾವುಟಗಳು ಹರಿದು ಹೋಗಿದೆ, ಚುನಾವಣಾ ಪರಿಶೀಲನೆಗೆ ಇಟ್ಟಿದ್ದ ಬ್ಯಾರಿಕೇಡುಗಳು ಜಾರಿ ಬಿದ್ದಿವೆ, ಅಲ್ಲಲ್ಲಿ ಚುನಾವಣೆಯ ಹಿಂದೆ ಮುಂದಿನ ಮಾತುಕತೆಗಳು ಸಾಗುತ್ತಿವೆ. ಇಷ್ಟೆಲ್ಲಾ ಆಗ್ತಾ ಇರೋದು ಚುನಾವಣೆಯಾಗಿ ಫಲಿತಾಂಶ ಬಂದು ಹಲವು ದಿನಗಳ ನಂತರ. ಆ ದೊಡ್ಡ ವಿಧಾನಸೌಧದ ಒಳಗೆ, ಊರ ಹೊರಗಡೆ ಒಬ್ಬರನ್ನೊಬ್ಬರು ತೆಗಳಿಕೊಂಡು ಬೈದಾಡುತ್ತಿದ್ದವರು ಒಂದೇ ಟೇಬಲಿನಲ್ಲಿ ಕುಳಿತು ಇಷ್ಟವಾದ ತಿಂಡಿ ತಿನ್ನುತ್ತಾ ಮುಂದಿನ ಯೋಜನೆಗಳ ಬಗ್ಗೆ ರಾಜ್ಯವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದರ ಬಗ್ಗೆ ತೀರ್ಮಾನ ಕೈಗೊಳ್ಳಲು ಊರ ಹೊರಗಿನ ವಿರೋಧಿಗಳು ಎದುರುಬದುರು ಕುಳಿತು ಚರ್ಚಿಸುತ್ತಿದ್ದಾರೆ, ಯಾವ ಯೋಜನೆ ತಮಗೆ ಯಾವ ರೀತಿಯಲ್ಲಿ ಲಾಭವಾಗಬಹುದು ಅನ್ನೋದಕ್ಕೆ ಲಾಭಿ ನಡೆಸಲು ವಿರುದ್ಧ ಪಕ್ಷಗಳ ದೊಡ್ಡ ನೇತಾರರು ಕೈಜೋಡಿಸಿ ನಡೆದಿದ್ದಾರೆ, ಇದು ದೊಡ್ಡ ಮಹಲಿನ ಒಳಗೆ ನಡೆಯುತ್ತಿರುವ ವಿಚಾರ .ಅದೇ ಎರಡು ಪಕ್ಷಗಳನ್ನು ಸದಾ ಬೆಂಬಲಿಸುತ್ತಾ ಆ ಪಕ್ಷಗಳ ಗೆಲುಪಿಗಾಗಿ ಹಗಳಿರಳು ಶ್ರಮಿಸಿದ ಆ ಊರಿನ ಕಾರ್ಯಕರ್ತರು ಇವತ್ತಿನವರೆಗೂ ತಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನ ಆ ಪಕ್ಷದ ಕಾರ್ಯಕರ್ತನಿಗೆ ನೀಡದೆ ಇರುವಷ್ಟು ಶತ್ರುಗಳಾಗಿದ್ದಾರೆ. ಮನೆಗೆ ಬೇಕಾದ ಅಗತ್ಯ ದಿನಸಿ ವಸ್ತುಗಳನ್ನ ಇನ್ನೊಂದು ಪಕ್ಷದವನ್ನ ಬೆಂಬಲಿಸುವ ಕಾರ್ಯಕರ್ತನ ಅಂಗಡಿಯಿಂದ ತರೋದನ್ನ ಮರೆತಿದ್ದಾರೆ, ಸದಾ ತನ್ನ ಪಕ್ಷ ಮಾಡುವ ಎಲ್ಲ ಒಳಿತುಗಳನ್ನು ಘೋಷಣೆ ಕೂಗುತ್ತಾ ತಾನು ಮಾತ್ರ ಆ ಪಕ್ಷದ ಅದ್ಭುತ ಕಾರ್ಯಕರ್ತ ಅನ್ನೋದನ್ನ ಬಿಂಬಿಸೋಕೆ ಹೊರಟಿದ್ದಾರೆ, ಜನರಿಗೂ ನಾಯಕರಿಗೂ ಇರುವ ವ್ಯತ್ಯಾಸ ಇದೆ. ಇನ್ನೂ ಅರ್ಥವಾಗದ ಜನ ವಿರುದ್ಧ ಮುಖಗಳನ್ನ ಹೊಂದಿ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ .ಪರಸ್ಪರ ಸಹಕಾರ ಇಲ್ಲದೆ ಕಚ್ಚಾಡಿಕೊಂಡಿದ್ದ ನಾಯಕರು ಒಂದೇ ಮನೆಯ ಒಳಗೆ ಒಂದೇ ತಟ್ಟೆಯಲ್ಲಿ ಇಷ್ಟವಾದ ತಿಂಡಿಗಳನ್ನು ಬಡಿಸಿಕೊಂಡು ತಿನ್ನುತ್ತಿದ್ದಾರೆ. ಇದು ವಿಪರ್ಯಾಸವೋ ಕೌತುಕವೋ ಗೊತ್ತಿಲ್ಲ ಗೊತ್ತಿಲ್ಲ .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ