ಸ್ಟೇಟಸ್ ಕತೆಗಳು (ಭಾಗ ೬೧೮) - ಕಾವೇರಿ

ಸ್ಟೇಟಸ್ ಕತೆಗಳು (ಭಾಗ ೬೧೮) - ಕಾವೇರಿ

ಆ ಊರಿನಲ್ಲೊಂದು ಶಾಲೆಯ ಅವಶ್ಯಕತೆ ಇತ್ತು. ಅದನ್ನ ಯಾರೋ ಒಬ್ಬರು ಕಟ್ಟಿಸಿಯೇ ಬಿಟ್ರು. ದಿನ ಕಳೆದಂತೆ ಆ ಶಾಲೆಯ ಮೌಲ್ಯ ಕಡಿಮೆಯಾಗುತ್ತಾ ಹೋಯಿತು. ಊರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು ಆಗ ಆ ಶಾಲೆಗೆ ಕಾಲಿಟ್ಟವರೆ ಕಾವೇರಿ ಟೀಚರ್. ಅವರ ಕೆಲಸವೂ ಅದ್ಭುತ ಶ್ರಮವಹಿಸಿ ದುಡಿಮೆ. ಕೆಳಗೆ ಬಿದ್ದ ಶಾಲೆಯನ್ನ ಮತ್ತೆ ಮೇಲೆದ್ದು ನಿಲ್ಲುವ ಹಾಗೆ ಮಾಡಿದರು. ಊರಿನವರೆಲ್ಲ ಶಾಲೆಯ ಬಗ್ಗೆ ಒಳಿತನ್ನೇ ಮಾತನಾಡುವ ಹಾಗೆ ಮಾಡಿದ್ರು. ಇಲ್ಲಿ ಕಲಿತ ವಿದ್ಯಾರ್ಥಿಗಳು ಬೇರೆ ಬೇರೆ ಕಡೆ ಕೆಲಸವನ್ನು ಸಂಪಾದಿಸುವ ಹಾಗೆ ಸಮಾಜದಲ್ಲಿ ಸದೃಢವಾಗಿ ನಿಲ್ಲುವ ಹಾಗೆ ವಿಷಯದ ಜ್ಞಾನ ತಲೆಯೊಳಗೆ ಸರಿಯಾಗಿ ಇಳಿಯುವ ಹಾಗೆ ಇವೆಲ್ಲವನ್ನ ಅವರು ಮಾಡುವುದು ಮುಂದುವರಿಯುತ್ತಾ ಇತ್ತು. ಶಾಲೆ ಹೆಸರು ಇನ್ನೊಂದಷ್ಟು ಪ್ರಸಿದ್ದಿಗೆ ಬಂತು. ಆ ಸಂಸ್ಥೆಯನ್ನ ನೋಡಿಕೊಳ್ಳೋಕೆ ಮುಖ್ಯಸ್ಥನ ಕೈ ಕೆಳಗೆ ಒಂದಷ್ಟು ಜನ ದೊಡ್ಡ ವ್ಯಕ್ತಿಗಳಿದ್ದರು. ಕಾವೇರಿ ಮೇಡಂನ ಕೆಲಸ ನೋಡಿ ಮುಂದೊಂದು ದಿನ ಇವರು ನಮ್ಮ ಪದವಿಗೆ ಮುಳುವಾಗ್ತಾರೆ ಅನ್ನುವಂತಹ ಆಲೋಚನೆಯಿಂದ ದೊಡ್ಡವರು ಅವರ ಮನಸ್ಸಿನಲ್ಲಿ ಬೇರೆ ಕಡೆಗೆ ಕೆಲಸ ಸಂಪಾದಿಸುವ ಆಸೆಯನ್ನು ಹುಟ್ಟಿಸಿದರು. ಹೊಸ ಕೆಲಸದ ಅವಶ್ಯಕತೆ ಇತ್ತು ಆದರೆ  ಬೆಳೆದ ಸಂಸ್ಥೆಯನ್ನು ಬಿಟ್ಟು ಹೋಗುವ ಜಾಯಮಾನ ಇವರದಲ್ಲ. ದೊಡ್ಡವರೆಲ್ಲಾ ಸೇರಿ ಒಪ್ಪಿಸಿದರು, ಮನಸ್ಸು ಭಾರವಾಗಿತ್ತು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ. ಸಂಸ್ಥೆ ಬೇಡವೆಂದರೂ, ವಿದ್ಯಾರ್ಥಿ ಬೇಡವೆಂದರು, ವೈಯಕ್ತಿಕವಾಗಿ ಅವರಿಗೆ ಬೇಡವಾಗಿದ್ದರೂ ಕೂಡ ದೊಡ್ಡವರ ಮಾತಿಗೆ ಗೌರವ ಕೊಟ್ಟು ಶಾಲೆ ಬಿಟ್ಟು ಹೊರ ನಡೆದರು. ಇನ್ನೂ ಅವರು ಪಾಠ ಮಾಡುತ್ತಾರೆ ವಿದ್ಯಾರ್ಥಿಗಳಿಗೆ ಅದ್ಭುತವಾಗಿ ಬೋಧಿಸ್ತಾರೆ ಆದರೆ ಆ ಶಾಲೆಯಲ್ಲ, ಶಾಲೆ ಬಿಟ್ಟು ಹೊಸ ಶಾಲೆ ಹೊಸ ಊರಿನ ಕಡೆಗೆ ನಡೆದು ಬಿಟ್ರು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ