ಸ್ಟೇಟಸ್ ಕತೆಗಳು (ಭಾಗ ೬೨೦) - ಮಾರಾಟ

ಸ್ಟೇಟಸ್ ಕತೆಗಳು (ಭಾಗ ೬೨೦) - ಮಾರಾಟ

ಜನ ಮನೆ ಕಡೆಗೆ ಚಲಿಸ್ತಾ ಇದ್ದಾರೆ. ಕಾರ್ಯಕ್ರಮ ಮುಗಿದು ಗಂಟೆಗಳಾಯಿತು, ಆತ ಮತ್ತೂ ಆಸೆಯಿಂದ ಕಾಯುತ್ತಿದ್ದಾನೆ. ಒಂದೆರಡು ಆಟಿಕೆಗಳಾದರೂ ಮಕ್ಕಳ ಕೈಯಲ್ಲಿ ಅವರವರ ಮನೆಗೆ ಸಾಗಬಹುದು ಅಂತ. ಈ ಆಟಿಕೆಗಳು ಮಕ್ಕಳು ಖರೀದಿಸಿದರೆ ಮಾತ್ರ ಅವನ ಮನೆಯಲ್ಲಿ ಅವನ ಮಕ್ಕಳು ನಗುವುದಕ್ಕೆ ಸಾಧ್ಯ. ಎಲ್ಲಾ ಜಾತ್ರೆಗಳಿಗೂ ತನ್ನ ಸೈಕಲ್ ಹಿಡಿದು ದೊಡ್ಡ ಚೀಲವನ್ನು ಸೈಕಲ್ಲಿಗೆ ಏರಿಸಿ ಆಟಿಕೆ ಸಾಮಾನುಗಳನ್ನ ಮಾರುವುದಕ್ಕೆ ಜಾತ್ರೆಯ ಒಂದು ಮೂಲೆಯಲ್ಲಿ ತಯಾರಾಗಿ ನಿಲ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ಯಾರೂ ಖರೀದಿಸುವವರು ಸಿಗುತ್ತಾನೆ ಇಲ್ಲ. ಮನೆಯವರಿಗೆ ಖರೀದಿಸುವ ಆಸೆ ಇದ್ದರೂ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ಹುಟ್ಟುತ್ತಿಲ್ಲ. ಅವನು ಎಲ್ಲಾ ಕಡೆಯೂ ಆಸೆಯಿಂದ ಕಾಯ್ತಾನೆ. ಎಲ್ಲ ಮಕ್ಕಳನ್ನ ಪ್ರೀತಿಯಿಂದ ಮಾತನಾಡಿಸುತ್ತಾನೆ. ಪ್ರತಿಯೊಂದು ಆಟಿಕೆಯನ್ನು ವಿಧವಿಧವಾಗಿ ಆಡಿಸಿ ತೋರಿಸ್ತಾನೆ ಮಕ್ಕಳ ಕಣ್ಣಿನಲ್ಲಿ ಕೌತುಕವೇನಾದರೂ ಕಾಣಬಹುದೇನೋ ಅಂತ, ಆದ್ರೆ ಮಕ್ಕಳಿಗೆ ಅದರ ಬಗ್ಗೆ ಗಮನವೇ ಬಂದಿಲ್ಲ. ಹೆತ್ತವರಿಗೆ ಅದರ ಬಗ್ಗೆ ಯೋಚನೆಯೂ ಇಲ್ಲ. ಈಗ ಮತ್ತೆ ಗಂಟನ್ನ ಗಟ್ಟಿಗೊಳಿಸುತ್ತಿದ್ದಾನೆ. ತಂದ ಅಷ್ಟು ಆಟಿಕೆಗಳು ಮತ್ತೆ ಮನೆಯ ಕಡೆಗೆ ಹೊರಟಿದೆ. ಮನೆಯಲ್ಲಿ ಮಕ್ಕಳ ಅಳುವಿಗೆ ಕಣ್ಣೀರು ಒರೆಸುತ್ತಾ ನಗುವನ್ನು ತರಿಸೋದು ಹೇಗೆ ಅಂತ ಯೋಚಿಸ್ತಾ ಇದ್ದಾನೆ....  ಮತ್ತೆರಡು ಜಾತ್ರೆಗಳ ವಿಳಾಸವನ್ನು ಪಡೆದು ಅತ್ತಕಡೆಗೆ ಹೊರಟಿದ್ದಾನೆ... ಆ ಊರಿನಲ್ಲಿ ಆದರೂ ಹೊಸ ಅಲೋಚನೆಯ ಮಕ್ಕಳು ಸಿಗಬಹುದು ಅಂತಾ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ