ಸ್ಟೇಟಸ್ ಕತೆಗಳು (ಭಾಗ ೬೩೮) - ಪಯಣ

ಬೇರೆ ಬೇರೆ ಊರಿನ ಬೇರೆ ಬೇರೆ ನೆಲದ ರುಚಿಯನ್ನು ಹೊಂದಿದ ನದಿಗಳೆಲ್ಲವೂ ಸಮುದ್ರವನ್ನು ಬಂದು ಸೇರುವಂತೆ, ಒಂದೊಂದು ಮನೆಯ ಒಂದೊಂದು ಆಚಾರ ವಿಚಾರ ಸಂಸ್ಕೃತಿ ಹೊಂದಿರುವ ಭಾಷೆ ಬದಲಾಗಿರುವ ಮನಸ್ಥಿತಿ ವಿಶೇಷವಾಗಿರುವ ಹಲವು ಮನಸ್ಸುಗಳು ಆ ಕಾಲೇಜಿನ ಬಳಿ ಸೇರಿದವು. ಅವರೆಲ್ಲರ ಗುರಿ ಪ್ರವಾಸದತ್ತ. ಬಸ್ಸನ್ನೇರಿ ಬಸ್ಸು ಚಲಿಸುವುದಕ್ಕಾರಂಭವಾಯ್ತು. ಪರಿಚಯಗಳು ಗಾಢವಾದವು, ಆತ್ಮೀಯತೆ ದೃಢವಾಯಿತು, ಇಷ್ಟರವರೆಗೂ ಹೀಗಂದುಕೊಂಡಿದ್ದವರು ಹಾಗಲ್ಲ, ಇವರನ್ನೂ ಅದ್ಭುತ ಅನ್ನೋದು ಅರಿವಾಯಿತು, ಇವರೆಷ್ಟು ಚೆನ್ನಾಗಿ ಮಾತಾಡ್ತಾರೆ, ಇವರೆಷ್ಟು ಚೆನ್ನಾಗಿ ನಮ್ಮಲ್ಲಿ ಬೆರಿತಾರೆ, ಕಷ್ಟಕ್ಕೆ ಇವರು ಸಹಾಯವಾಗ್ತಾರೆ. ಹೀಗೆ ಹೊಸ ಹೊಸ ವಿಚಾರಗಳ ಅನುಭವಗಳು ಸಿಗುತ್ತಾ ಹೋದವು. ಪ್ರವಾಸದ ತಾಣ ತಲುಪಿ ಕ್ಷಣಗಳನ್ನ ಆಸ್ವಾದಿಸಿದರು. ಹಲವರಿದ್ದವರೂ ಒಂದು ಅನ್ನುವ ಭಾವಕ್ಕೆ ಬಂದಿದ್ದರು. ಮತ್ತೆ ಸಮುದ್ರವೂ ತಿರುಗಿ ನದಿಯ ಸೇರುವ ವಿರೋಧಾಭಾಸದಂತೆ ಅವರವರ ಮನೆಯ ಕಡೆಗೆ ತೆರಳುವ ಆ ಕ್ಷಣದಲ್ಲಿ ಪ್ರತಿಯೊಬ್ಬರಿಗೂ ಸಣ್ಣ ಬೇಸರ, ಹೀಗೆ ಜೊತೆಯಾಗಿರೋದಕ್ಕೆ ಇನ್ನೊಂದು ಅವಕಾಶ ಸಿಗೋದಿಲ್ಲಾ ಅಂತ .ಆದರೆ ಜೀವನದ ಅದ್ಭುತ ಪುಟಗಳನ್ನು ಎಲ್ಲರೂ ಅವರವರ ಪುಸ್ತಕಗಳಲ್ಲಿ ಅಚ್ಚೊತ್ತಿಬಿಟ್ಟಿದ್ದಾರೆ. ಇನ್ನು ಈ ನೆನಪುಗಳ ಜೊತೆ ಅದ್ಭುತವಾಗಿ ಬದುಕೋದಕ್ಕೂ ಇದ್ದಾರೆ. ಮತ್ತೆ ಈ ನದಿಗಳೆಲ್ಲ ಸೇರುತ್ತವೆ ಜೊತೆಯಾಗ್ತವೆ ಸಂಭ್ರಮ ಖುಷಿಗಳನ್ನ ಹಂಚಿಕೊಳ್ಳುತ್ತವೆ. ಮತ್ತೆ ತಮ್ಮ ತಮ್ಮ ಮನೆಗಳ ಕಡೆಗೆ ತೆರಳುತ್ತದೆ, ಈ ಚಕ್ರ ಹೀಗೆ ಮುಂದುವರೆಯುತ್ತಾ ಹೋಗುತ್ತದೆ ಆದರೆ ಸತ್ಯ ಏನು ಗೊತ್ತಾ... ಮುಂದೊಂದು ದಿನ ಬದುಕಿನ ಜವಾಬ್ದಾರಿಗಳು ಹೊಸ ಕನಸುಗಳು ಹೊಸ ದಿಷೆಗಳು ಒಬ್ಬೊಬ್ಬರನ್ನ ಒಂದೊಂದು ದಿಕ್ಕಿನ ಕಡೆಗೆ ಕೊಂಡು ಹೋಗುತ್ತದೆ ಮತ್ತೂ ಕೂಡ ಈ ಸಂಬಂಧವನ್ನು ಹೀಗೆ ಉಳಿಸಿಕೊಳ್ಳಬೇಕು ಅನ್ನುವ ದೃಷ್ಟಿಯಲ್ಲಿ ಮಾತ್ರ ಇವರು ಬದುಕಿದ್ದಾರೆ. ಎಲ್ಲದಕ್ಕೂ ಆ ಕಾಲನೆ ಉತ್ತರ ಕೊಡಬೇಕು ಹೀಗಿರುತ್ತೋ ಬದಲಾಗುತ್ತೋ ಹೊಸತನದಿಂದಿರುತ್ತೋ ಅನ್ನೋದನ್ನ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ