ಸ್ಟೇಟಸ್ ಕತೆಗಳು (ಭಾಗ ೬೫೨) - ಮಣ್ಣಿನ ಮಗ
ಕಣ್ಣಂಚಲಿ ಸಣ್ಣ ನೀರು ಹಾಗೆಯೇ ಕೆಳಗಿಳಿದು ನೆಲವನ್ನ ಮುಟ್ಟಿತು. ಕಣ್ಣೀರಿಗೂ ಕಾರಣವಿತ್ತು. ಕಣ್ಣೀರು ಹಲವು ಸಲ ಕಣ್ಣಿನಿಂದ ಕೆನ್ನೆಯ ಮೇಲೆ ಜಾರಿ ಕೆಳಗಿಳಿದಿತ್ತು ಆದರೆ ಕಾರಣಗಳು ಬೇರೆ. ಹೊಟ್ಟೆಯ ಹಸಿವು ಇದ್ದು ಭೂಮಿಯಲ್ಲಿ ದುಡಿಯೋಕೆ ಆಗ್ತಾ ಇಲ್ಲ . ಆದರೆ ಅದೇನು ಪುಣ್ಯವೋ ಗೊತ್ತಿಲ್ಲ ಆತ ಕೆಲಸ ಮಾಡುತ್ತಾ ಇದ್ದಂತಹ ಮನೆಯ ಯಜಮಾನರು ಆತನ ಎಷ್ಟು ವರ್ಷದ ಶ್ರಮವನ್ನ ನಂಬಿ ತಾವು ಸಮಯ ಸಿಕ್ಕಾಗ ಬೆಳೆತಾ ಇದ್ದ ಆ ಎರಡು ದೊಡ್ಡ ಗದ್ದೆಗಳನ್ನು ಅವನ ಹೆಸರಿಗೆ ಮಾಡಿ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಟ್ರಾಕ್ಟರ್ ಗಳು ಬಂದು ಇಡೀ ಗದ್ದೆಯನ್ನ ಚೆನ್ನಾಗಿ ಉತ್ತಿದವು, ಮಳೆರಾಯ ಸರಿಯಾದ ಸಮಯಕ್ಕೆ ಬಂದು ಉತ್ತಮವಾದ ಮಳೆಯನ್ನು ಸುರಿಸಿ ಗದ್ದೆಯ ತುಂಬಾ ನೀರನ್ನು ಚೆಲ್ಲಿಬಿಟ್ಟನು. ಆತ ಚಪ್ಪಲಿಗಳನ್ನು ಕಳಚಿ ಗದ್ದೆಯೊಳಗೆ ಕಾಲಿಟ್ಟಾಗ ದೇಹದೊಳಗೆ ಆದ ರೋಮಾಂಚನವನ್ನ ಮರೆಯೋದಕ್ಕೆ ಸಾಧ್ಯ ಇಲ್ಲ. ಪ್ರತಿ ಒಂದು ದೇಹದ ನರ ನಾಡಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇಷ್ಟು ದಿನ ಎಲ್ಲೋ ಒಂದು ಕಡೆ ಬೆನ್ನು ಬಾಗಿಸಿ ಸಿಕ್ಕಿದ ಸಂಬಳದಲ್ಲಿ ಮನೆಯನ್ನು ನಡೆಸುತ್ತಿದ್ದ.ಇಂದು ತನ್ನ ಸ್ವಂತ ಜಮೀನಿನಲ್ಲಿ ಬೆನ್ನು ಬಗ್ಗಿಸಿ ತಲೆ ಬಾಗಿಸಿ ದುಡಿದು ತಲೆಯೆತ್ತಿ ಬದುಕುವ ಛಲವನ್ನ ಹೊಂದಿ ಕೆಲಸ ಪ್ರಾರಂಭಿಸಿದ್ದಾನೆ. ಈಗ ಇಳಿಯುತ್ತಿರುವ ಕಣ್ಣೀರು ಬದುಕಿನ ಹೊಸ ದಾರಿಯನ್ನ ಒದ್ದೆ ಮಾಡಿ ಮುಂದೆ ಹೆಜ್ಜೆ ಇಡಲು ಸಹಕರಿಸಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ