ಸ್ಟೇಟಸ್ ಕತೆಗಳು (ಭಾಗ ೬೫೬) - ಪಾದ
ಎಲ್ಲಾ ಕಡೆಯೂ ಚಪ್ಪಲಿ ಕಳೆದು ಹೋದಾಗ ಚಪ್ಪಲಿ ಕಳೆದುಕೊಂಡವ ಹುಡುಕುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಶೇಷ, ಆ ಪಾದಗಳೆರಡು ತಾವು ಇಂದಿನ ದಿನದವರೆಗೆ ಹಾಕಿಕೊಂಡಿದ್ದ ಆ ಪುಟ್ಟ ಚಪ್ಪಲಿಗಳನ್ನು ಹುಡುಕುತ್ತಿದ್ದಾವೆ. ಆ ಪಾದಗಳಿಗೆ ಅದೇ ಚಪ್ಪಲಿಗಳು ಬೇಕು ಬೇರೆ ಯಾವುದೂ ಅಲ್ಲ. ಕಾರಣವೇನೆಂದರೆ ಇದಕ್ಕೆ ಹಿಂದೆ ಜೊತೆಯಾಗಿದ್ದ ಎಲ್ಲ ಚಪ್ಪಲಿಗಳು ಆ ಪಾದಗಳನ್ನ ಕಚ್ಚಿ ತಿಂದು ನೋವು ಮಾಡಿ ಕೆಸರು ಮಾಡಿ ಮಲಿನ ಮಾಡಿ ಬಿಡುತ್ತಿದ್ದವು. ಆದರೆ ನಿನ್ನೆಯವರೆಗೂ ಜೊತೆಗಿದ್ದ ಚಪ್ಪಲಿ ಕಾಲಿನ ಅಂದವನ್ನು ಹೆಚ್ಚಿಸಿ ಕಾಲಿಗೆ ಒಂದೇನಿತೂ ನೋವಾಗದಂತೆ ಪ್ರೀತಿಯಿಂದ ಜತನದಿಂದ ಕಾಯ್ದುಕೊಂಡು ಬಂದಿದ್ದು ಅದಕ್ಕಾಗಿ ಆ ಬರಿಗಾಲ ಪಾದಗಳು ತಾವು ಧರಿಸಬೇಕಾದ ಚಪ್ಪಲಿಯನ್ನು ಹುಡುಕ ಹೊರಟಿದೆ. ಕೊನೆಯ ಕ್ಷಣದಲ್ಲಿ ಚಪ್ಪಲಿ ಎಲ್ಲಿ ತೊರೆದಿದ್ದೇವೆ ಅನ್ನೋದು ಅವರಿಗೆ ನೆನಪಾಗುತ್ತಿಲ್ಲ. ಅದಕ್ಕೆ ತಾವು ಚಲಿಸಿದ ಪ್ರತಿಯೊಂದು ಜಾಗವನ್ನ ಹುಡುಕಿ ಹುಡುಕಿ ನೋಡಿದ್ದಾರೆ. ಪಾದಗಳು ನೋವನ್ನ ಅನುಭವಿಸುತ್ತಿದೆ. ಆದರೆ ಚಪ್ಪಲಿ ಸಿಗುವ ಖುಷಿಯ ಮುಂದೆ ನೋವು ದೊಡ್ಡದಲ್ಲ. ಕಲ್ಲು ಮುಳ್ಳು ಎಲ್ಲವೂ ಕೂಡ ಪಾದದ ಮೂಲಕ ದೇಹದೊಳಗಿನ ರಕ್ತವನ್ನು ಒಂದು ಸಲ ನೆನಪಿಸುತ್ತಿದೆ. ಆದರೆ ಆ ಪಾದಗಳಿಗೆ ತಾವು ಕಳೆದುಕೊಂಡಿದ್ದ ಆ ಚಪ್ಪಲಿಗಳ ಗುರುತು ಕೊನೆಗೂ ಸಿಗಲಿಲ್ಲ. ಈಗ ವಿಧಿ ಇಲ್ಲದೆ ಹೊಸ ಚಪ್ಪಲಿಯನ್ನ ಧರಿಸ ತೊಡಗಿದ್ದಾರೆ ಕೆಲವು ದಿನಗಳವರೆಗೆ ಕಷ್ಟವೆನ್ನುವಷ್ಟು ಉಸಿರಾಟದಲ್ಲಿ ತೊಂದರೆಯ ಪರಿಸ್ಥಿತಿ ಉಂಟಾಯಿತು. ಆದರೆ ಈಗ ಪಾದ ಅದಕ್ಕೂ ಒಗ್ಗಿಕೊಂಡಿದೆ. ಎಲ್ಲವೂ ನಮ್ಮ ಮನಸ್ಸಿನ ಒಳಗಿನ ತರಂಗಗಳ ಮೇಲೆ ಅವಲಂಬಿಸಿರೋದು... ನಿರ್ಧಾರ ನಮ್ಮದೇ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ