ಸ್ಟೇಟಸ್ ಕತೆಗಳು (ಭಾಗ ೬೫೯) - ಕೆರೆ

ಸ್ಟೇಟಸ್ ಕತೆಗಳು (ಭಾಗ ೬೫೯) - ಕೆರೆ

ಆ ಕೆರೆ ತುಂಬಿಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ಸಲ ಮಳೆ ನೀರಿಗೆ, ಉಳಿದ ಸಮಯದಲ್ಲಿ ಕೊಳಚೆ ನೀರಿಗೆ, ಒಟ್ಟಿನಲ್ಲಿ ಆ ಕೆರೆ ಖಾಲಿಯಾಗುವುದೇ ಇಲ್ಲ. ಹಾಗೆಯೇ ಕೊಳಚೆ ನೀರು ಹೆಚ್ಚಾದಾಗ ಮಳೆ ನೀರು ತುಂಬಿದಾಗ ನೀರು ಹರಿದುಕೊಂಡು ಬಂದು ಗದ್ದೆಯನ್ನು ಸೇರಿಕೊಳ್ಳುತ್ತದೆ. ಗದ್ದೆ ಕೆರೆಗಳು ಎಲ್ಲವೂ ಒಂದಾಗಿ ಹೊಸತೊಂದು ವಾತಾವರಣವೇ ನಿರ್ಮಾಣವಾಗಿ ಬಿಡುತ್ತದೆ. ಕೆರೆ ಮಧ್ಯದಲ್ಲೊಂದು ಚೆಂಡು ಅದು ಯಾರು ಆಟ ಆಡಿ ಅಲ್ಲಿಗೆ ತಲುಪಿಸಿದ್ದೋ ಗೊತ್ತಿಲ್ಲ. ಕ್ಷಣ ಕ್ಷಣಕ್ಕೂ ಆ ಚೆಂಡು ತನ್ನ ಸ್ಥಾನಗಳನ್ನು ಬದಲಿಸುತ್ತಾ ಇದೆ. ಕೆಲವೊಂದು ಸಲ ಮುಳುಗಿ ಏಳುತ್ತಿದೆ. ಓಡುತ್ತಿದೆ, ತೇಲುತ್ತಿದೆ. ಕೆಲವು ದಿನಗಳಿಂದ ಇಷ್ಟರವರೆಗೂ ಇರದ ನಾಯಿ ಒಂದು ಆ ಕೆರೆಯ ಸುತ್ತಮುತ್ತ ಓಡಾಡ್ತಾ ಇದೆ ಅದಕ್ಕೆ ಕೆರೆಗೆ ಇಳಿಯೋದಕ್ಕೆ ಭಯ, ಮುಳುಗುತ್ತೇನೋ ಅನ್ನುವ ಆತಂಕ. ಆ ಚೆಂಡಿನ ಜೊತೆ ಆಟವಾಡುವುದಕ್ಕೆ  ಪ್ರತಿದಿನ ಪರಿತಪಿಸುತ್ತಿದೆ .ಆ ದಿನ ಜೋರು ಮಳೆ, ಆ ಮಳೆಗೆ ನೀರು ಹೆಚ್ಚಾಗಿ ಚೆಂಡು ಬದಿಗೆ ಬರುವ ಲಕ್ಷಣ ನಾಯಿಯ ಮುಖದಲ್ಲಿ ಅದೇನೋ ಸಂಭ್ರಮ ಕಷ್ಟಪಟ್ಟು ಹೇಗೋ‌ ಚೆಂಡನ್ನ ಹಿಡಿದುಕೊಂಡು ಸಮತಟ್ಟಾದ ಪ್ರದೇಶಕ್ಕೆ ಬಂದೇಬಿಡ್ತು.ಆ ಚೆಂಡಿಗೂ ಆ ನಾಯಿಗೂ ಅದೇನು ಅವಿನಾಭಾವ ಸಂಬಂಧವು ಗೊತ್ತಿಲ್ಲ. ಮನಸ್ಸು ಇಚ್ಛೆ ತೀರುವಷ್ಟು ಆಟವಾಡಿತು. ಅಂದಿಗೆ ಆ ಚಂಡಿಗೂ ಜೀವನದಲ್ಲಿ ಸಾರ್ಥಕ ಸಿಕ್ಕಿತ್ತೇನೋ ಗೊತ್ತಿಲ್ಲ.ಒಡೆದೇ ಹೋಯಿತು.  ನಾಯಿ ಓಡಿಹೋಯಿತು. ಕೆರೆ ಮತ್ತೆ ಅನಾಥವಾಯಿತು ಹೊಸ ಚೆಂಡಿಗಾಗಿ ಹೊಸ ನಾಯಿಗಾಗಿ ಮತ್ತು ಹೊಸ ಮಳೆಗಾಗಿ ಕಾಯುತ್ತಾ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ