ಸ್ಟೇಟಸ್ ಕತೆಗಳು (ಭಾಗ ೬೬೦) - ಆಳ

ಸ್ಟೇಟಸ್ ಕತೆಗಳು (ಭಾಗ ೬೬೦) - ಆಳ

ಆ ಕೆರೆಯ ನೀರು ತಂಪಾಗಿ ದಡದ ಸುತ್ತಲಿನ ನೆರಳನ್ನ ತನ್ನೊಳಗೆ ಪ್ರತಿಫಲಿಸುತ್ತಿತ್ತು, ಸಂಜೆಯಾದರೆ ಸಾಕು ಊರಿನ ಒಂದಷ್ಟು ಜನ ಆ ಕೆರೆಯಲ್ಲಿ ಈಜಾಡಿ ದೇವರಿಗೆ ಕೈ ಮುಗಿದು ಮನೆಗೆ ತೆರಳುತ್ತಾರೆ. ಆ ದಿನವೂ ಹಾಗೆ ಒಂದಷ್ಟು ಜನ ಹುಡುಗುರು ದೊಡ್ಡವರು ಕೆರೆಯಲ್ಲಿ ಈಜಾಡತ್ತಿದ್ದರು. ಆ ಕ್ಷಣ ಏನಾಯ್ತು ಗೊತ್ತಿಲ್ಲ. ಆತ ಹೆಜ್ಜೆ ತಪ್ಪಿ ಆಳಕ್ಕೆ ಚಲಿಸೋದ್ದಕ್ಕೆ ಆರಂಭಿಸಿದ. ಅಡಿಗಳು ಹೆಚ್ಚಾಗಿ ಪಾತಾಳವನ್ನು ಮುಟ್ಟುವ ತವಕದಲ್ಲಿ ಆತನಿದ್ದಾನೆ. ಆಗ ದಡದಲ್ಲಿ ನಿಂತಿದ್ದ ಹಿರಿಯರೊಬ್ಬರಿಗೆ ಸೂಚನೆಯೊಂದು ಸಿಕ್ಕು ನೇರವಾಗಿ ಕೆರೆಯೊಳಗೆ ಧುಮುಕಿಬಿಟ್ಟರು. ತಾವು ಅಡಿ ಲೆಕ್ಕದಲ್ಲಿ ಒಳಗಿಳಿಯುತ್ತಾ ಆತನನ್ನ ಮೇಲಕ್ಕೆತ್ತಿ ತಂದಾಗ ಆತನ ದೇಹ ಮರಗಟ್ಟುವ ಸೂಚನೆ ನೀಡಿತ್ತು. ಕಷ್ಟಪಟ್ಟು ಆತನಿಗೆ ಮತ್ತೊಂದು ಉಸಿರನ್ನು ನೀಡುವ ಪ್ರಯತ್ನ ಮಾಡಿದ್ರು. ಆತನ ದೇಹ ಮತ್ತೆ ಚೈತನ್ಯವನ್ನು ಪಡೆಯಿತು. ಒಂದು ಜೀವ ಆ ಕೆರೆಯ ನೀರಿನಿಂದ  ಬದುಕುಳಿದಿತ್ತು. ದಿನಗಳು ಉಳಿದವು ಆತನಿಗೂ ವಯಸ್ಸು ಹೆಚ್ಚಾಗುತ್ತಾ ಹೋಯಿತು. ಪಡೆದುಕೊಂಡ ಜೀವವನ್ನ ನೀಡಿದವರಾರೆನ್ನುವುದು ಆತನಿಗೆ ತಿಳಿದಿತ್ತು .ಆದರೆ ಸುತ್ತಮುತ್ತಲಿನ ವಿಚಾರಗಳ ಅಹಂಕಾರ ತಾನು ಮಾಡುತ್ತಿರುವ ಕೆಲಸದ ಬಗೆಗಿನ ಅಹಂ, ತನ್ನಂತವರು ಯಾರು ಇಲ್ಲ ಅನ್ನುವಂತಹ ಒಂದೆರಡು ಮಾತುಗಳನ್ನು ಕೇಳಿ ಆತ ಯಾರನ್ನು ಗಮನಿಸಿದ ಮಟ್ಟಕ್ಕೆ ಬೆಳೆದು ನಿಂತ. ತನಗೆ ಉಸಿರು ನೀಡಿದವರು ಪ್ರೀತಿಯಿಂದ ಮಾತನಾಡುವ ಸೌಜನ್ಯವನ್ನು ಕಳೆದುಕೊಂಡ. ಅವರಿಗೆ ಆಗಾಗ ನೆನಪಾಗುತ್ತದೆ ಜೀವ ಬಿಟ್ಟು ಉಸಿರು ಕಾಪಾಡಿದವ ಮನಃಸ್ಪೂರ್ತಿಯಾಗಿ ನಗುವುದನ್ನು ಮರೆತುಬಿಟ್ಟಿದ್ದಾನಲ್ಲ.  ಅವರು ಆಗಾಗ ಕೊರಗುತ್ತಾರೆ ಅವರಿಗೆ ಕೃತಜ್ಞತೆ ಬೇಡ ಧನ್ಯವಾದಗಳು ಬೇಡ ಹೊಗಳುವುದು ಬೇಡ ಆದರೆ ಮನುಷ್ಯನಾಗಿ ಮನುಷ್ಯತ್ವದಿಂದ ಜೊತೆಯಾಗಿ ಬದುಕುವುದಕ್ಕೆ, ನಗುವನ್ನ‌ ಹಂಚಬಹುದಲ್ವಾ ? ಆಗಾಗ ಕೆರೆಯ ಮುಂದೆ ಬಂದಾಗ ಅವರಿಗೆ ಕೆರೆಯಲ್ಲಿ ಎದ್ದ ಸಣ್ಣ ತರಂಗಗಳಂತೆ ಮನಸ್ಸಿನೊಳಗೂ ಯೋಚನೆಯ ತರಂಗಗಳು ಏಳುತ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ