ಸ್ಟೇಟಸ್ ಕತೆಗಳು (ಭಾಗ ೬೭) - ಹೆಜ್ಜೆ

ಸ್ಟೇಟಸ್ ಕತೆಗಳು (ಭಾಗ ೬೭) - ಹೆಜ್ಜೆ

ನಿಲ್ಲದ ಪಯಣ ಅವರದು. ಕಾಡು ದಾಟಿಯೇ ಶಾಲೆ ತಲುಪಬೇಕು. ಆ ಶಾಲೆಯಲ್ಲಿ ವಿದ್ಯೆ, ಪಡೆಯುವಷ್ಟು ಸಿಗದಿದ್ದರೂ ಬೇರೆ ಅವಕಾಶವೇ ಇರಲಿಲ್ಲ. ಹಾಗಾಗಿ ಆ ಊರು ಬಿಟ್ಟು ಅಜ್ಜಿಯ ಮನೆಯಲ್ಲಿ ಬೆಳವಣಿಗೆಯ ಮೊದಲ ಹೆಜ್ಜೆ ಇರಿಸಿದ. ಕನಸುಗಳು ತುಂಬಾ ದೊಡ್ಡವು. ದುಡ್ಡು ಆಗಾಗ ತನ್ನ ಅಡ್ಡಗಾಲು ಹಾಕುತ್ತಾ ಇತ್ತು. ದೊಡ್ಡ ಶಿಕ್ಷಣಕ್ಕಾಗಿ ಗುರುತಿಲ್ಲದ ಊರಿಗೆ ನಡೆಯಬೇಕಾಯಿತು. ಅನಿವಾರ್ಯತೆಯ ನಡುವೆ ಛಲಬಿಡದೆ ಓದಿದ್ದಕ್ಕೆ ರಾಜ್ಯ ಗುರುತಿಸುವ ಸಾಧನೆಯಾಯಿತು. ಶಿಕ್ಷಣ ಪಡೆದು ಕೆಲಸ ಮಾಡುವುದೇ ಯೋಜನೆಯಲ್ಲ? ಕೆಲಸ ನೀಡಬೇಕು. ಎಲ್ಲರಂತೆ ನಾನಲ್ಲ ವಿಶೇಷನಾಗಬೇಕು ಅನ್ನೋ ಯೋಚನೆಯಿಂದ ತನಗಿಂತ ಕಿರಿಯವರಿಗೆ ತಾನು ಕಲಿತದ್ದನ್ನು ಕಲಿಸೋಕೆ ಶ್ರಮಿಸಿದ. ಮೊದಲ ಮೆಟ್ಟಿಲು ಬಿಗಿಯಾಗಿ ಇರಲಿಲ್ಲ ಜಾರಿತು. ಅನುಭವದಿಂದ ಪಾಠ ಕಲಿತ. ಮತ್ತಷ್ಟು ಅನುಭವ ಸಂಪಾದಿಸಿ ದೊಡ್ಡ ಮೆಟ್ಟಿಲೇರಿದ. ಅಲ್ಲಿ ಇವರಿಂದ ಉಪಯೋಗ ಪಡೆದುಕೊಂಡವರು ಮೆಟ್ಟಿಲನ್ನು ಗಟ್ಟಿಯಾಗಿ ನಿರ್ಮಿಸಿ ಇನ್ನೂ ಎತ್ತರಕ್ಕೆ ಏರಿ ಇವರನ್ನ ಅಲ್ಲಿಂದ ತಳ್ಳಿಬಿಟ್ಟರು. ಕೆಳಗೆ ಬಿದ್ದವರನ್ನ ಇವರ ಕನಸುಗಳು ಮುಳುಗೋಕೆ ಬಿಡಲಿಲ್ಲ. ಛಲದಿಂದಲೇ ನುಗ್ಗಿದವನು ಉಳಿದವರನ್ನೆಲ್ಲ ಸರಿಸಿಕೊಂಡು ಎತ್ತರಕ್ಕೇರಿದ. ಆದರೂ ಸಂತಸವಿಲ್ಲ ಇನ್ನೂ ಮೇಲೆ ಏರಬೇಕು. ನನ್ನೊಂದಿಗೆ ನನ್ನ ನಂಬಿದವರು ತಲೆಯೆತ್ತಿ ನಿಲ್ಲಬೇಕು. ಕಾರ್ಯಕ್ರಮವನ್ನು ದೂರದಲ್ಲಿ ನೋಡುತ್ತಿದ್ದವನು ಮುಖ್ಯ ಅತಿಥಿಯಾದ, ಶಾಲೆಗೆ ಕಾಡು ದಾಟಿದವನು ಶಿಕ್ಷಣ ಸಂಸ್ಥೆಯೊಂದರ ಒಡೆಯನಾದ. ಉಪವಾಸ ಮಲಗಿದವ ಸರಳತೆಯಿಂದ ಹಲವರಿಗೆ ಅನ್ನ ನೀಡುವ ದಾರಿತೋರಿಸಿದ. 

ಪ್ರತೀ ಕ್ಷಣವನ್ನು  ವಿನಿಯೋಗಿಸುತ್ತಾರೆ ದೊಡ್ಡು ಕನಸಿಗೆ. ಇಟ್ಟ ಹೆಜ್ಜೆಯನ್ನು ಒಮ್ಮೆ ಹಿಂತಿರುಗಿ ನೋಡಿ ಮುಂದುವರೆಯುತ್ತಾರೆ. ಸಲಹೆ-ಸೂಚನೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ತನ್ನ ನೆಲದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎನ್ನುವ ಆಸೆಯಿಂದ ತುಡಿಯುತ್ತಾರೆ ನಿನ್ನಿಂದ ಆಗುವುದಿಲ್ಲ ಎಂದವರು ಇದೀಗ ಅವನ ಸಾಧನೆಯ ಮುಂದೆ ಮೌನವಾಗಿದ್ದಾರೆ. "ಸಾಕಪ್ಪ ಸಾಕು ಎನ್ನದ್ದಿದ್ದರೆ ನಾನೇನು ಅನ್ನೋದು ತೋರಿಸಬಹುದು ಜಗತ್ತಿಗೆ" ಅನ್ನುತ್ತಾರೆ.

ಇದಿಷ್ಟು ಇವರ ಬಗ್ಗೆ ನಾನು ತಿಳಿದುಕೊಂಡಿರುವ ವಿಚಾರ. ನಿಮಗೆಲ್ಲಾದರೂ ಅವರು ಸಿಕ್ಕರೆ ಮುಖತಃ ಮಾತನಾಡಲಿಕ್ಕೆ ಒಂದು ಅವಕಾಶ ಮಾಡಿಕೊಡಿ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ - ಇಂಟರ್ನೆಟ್ ತಾಣ