ಸ್ಟೇಟಸ್ ಕತೆಗಳು (ಭಾಗ ೬೮೦) - ಗ್ಯಾರೇಜು

ಅಡ್ಡಾದಿಡ್ಡಿಯಾಗಿ ಹೊಂಡ ಗುಂಡಿಗಳಿಂದಲೇ ತುಂಬಿಕೊಂಡಿತ್ತು ಆ ರಸ್ತೆ. ಆ ಕಾರಣಕ್ಕೋ ಏನೋ ನಾವು ಚಲಿಸುತ್ತಿದ್ದ ಗಾಡಿಯ ಚಕ್ರ ಮುಂದೆ ಚಲಿಸಲಿಕ್ಕಾಗದೇ ಅಲ್ಲೇ ನಿಂತುಬಿಟ್ಟಿತ್ತು. ಸಮಸ್ಯೆ ಪರಿಹಾರ ಆಗಬೇಕು ಅಂತಿದ್ರೆ ಅದನ್ನು ಸರಿ ಮಾಡುವ ಅಲ್ಲಿಗೆ ಬರಲೇಬೇಕು. ಹಾಗಾಗಿ ಇತ್ತ ಕಡೆಯಿಂದ ಗ್ಯಾರೇಜ್ ಗೆ ಕರೆ ಹೋಯಿತು. ಬಂದ ವ್ಯಕ್ತಿಯನ್ನು ಗಮನಿಸಿದಾಗ ಆತ ಏನೆಲ್ಲ ಸಮಸ್ಯೆಗಳು ಆಗಿರಬಹುದು ಅನ್ನೋದನ್ನ ಯೋಜಿಸಿ ನಿರ್ಧರಿಸಿದಂತೆ ಬೇಕಾಗುವ ಎಲ್ಲಾ ಸಲಕರಣೆಗಳನ್ನು ಹೊತ್ತು ತಂದಿದ್ದ. ಆತನಿಗೆ ಸಮಸ್ಯೆಯನ್ನು ಪೂರ್ತಿಯಾಗಿ ನಾವು ವಿವರಿಸಿರಲಿಲ್ಲ. ಆದರೆ ಆತ ಎಲ್ಲದಕ್ಕೂ ತಯಾರಾಗಿ ಬಂದಿದ್ದ. ಅದರಲ್ಲಿ ಒಂದು ಸಮಸ್ಯೆಯ ಪರಿಹಾರವು ಜೊತೆಯಲ್ಲಿದ್ದ ಕಾರಣ ನಮ್ಮ ಗಾಡಿ ಚಲಿಸುವಂತಾಯ್ತು. ನಾವು ತಲುಪಬೇಕಾದ ದಾರಿಯನ್ನ ಸೇರಿಕೊಂಡಾಯಿತು. ನನಗೆ ಗ್ಯಾರೇಜಿನ ವ್ಯಕ್ತಿ ಹಾಳಾಗಿದ್ದ ನಿನ್ನ ಜೀವನವನ್ನ ರಿಪೇರಿ ಮಾಡೋದಿಕ್ಕೆ ಒಂದಷ್ಟು ಸಲಹೆಗಳನ್ನು ಕೊಟ್ಟು ಬಿಟ್ಟು ಹೋಗಿದ್ದ. ಸಮಸ್ಯೆಗಳು ಕಣ್ಣ ಮುಂದೆ ಬರುತ್ತವೆ. ಆ ಸಮಸ್ಯೆಗೆ ಮಾತ್ರ ಪರಿಹಾರವನ್ನು ಹುಡುಕದೆ ಯಾವ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರ ಸಾಧ್ಯ ಇದೆ ಅನ್ನೋದಕ್ಕೆ ಸಿದ್ಧವಾದ ಸಲಕರಣೆ ನಮ್ಮಲ್ಲಿರಬೇಕು.ಆಗ ಯಾವುದೇ ಚಿಂತೆ ಇಲ್ಲದೆ ಯೋಚನೆಯಿಲ್ಲದೆ ಸಮಸ್ಯೆಗಳು ನಿವಾರಣೆಯಾಗುತ್ತವೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ