ಸ್ಟೇಟಸ್ ಕತೆಗಳು (ಭಾಗ ೬೮೯) - ತಪ್ಪೇನು?

ಸ್ಟೇಟಸ್ ಕತೆಗಳು (ಭಾಗ ೬೮೯) - ತಪ್ಪೇನು?

ಅವಳು ಅಂದುಕೊಂಡಿರಲಿಲ್ಲ ರಸ್ತೆ ದಾಟುವ ಆ ಕ್ಷಣದಲ್ಲಿ ವೇಗವಾಗಿ ಗಾಡಿಯೊಂದು ಬಂದು ಅವಳನ್ನು ಗುದ್ದಿ ಅವಳ ದೇಹ ನೆಲದಿಂದ ಎಗರಿ ಮತ್ತೆ ನೆಲಕ್ಕೆ ಬಡಿದು ಪ್ರಾಣ ಪಕ್ಷಿ ಹಾರಿಹೋಗುತ್ತದೆ ಅಂತ. ಅಮ್ಮನ ಬಳಿ ಪ್ರೀತಿಯಿಂದ ಟಾಟಾ ಹೇಳಿ ಬಂದಿದ್ದವಳು ಮತ್ತೆ ಮನೆಗೆ ಬರೋದಿಲ್ಲ ಅನ್ನೋದು ಅಮ್ಮನಿಗೂ ಗೊತ್ತಿರಲಿಲ್ಲ. ಪ್ರತೀ ದಿನ ದಾಟುವ ರಸ್ತೆ ಉಸಿರನ್ನು ನೆಲದ ಮೇಲೆ ಚೆಲ್ಲುವಂತೆ ಮಾಡುತ್ತೆ ಅನ್ನೋದು ಆಕೆಗೆ ಗೊತ್ತಿರಲಿಲ್ಲ. ಮುಂದೆ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಡು ಹಾಡೋದಕ್ಕೆ ಪ್ರತಿದಿನವೂ ಅಭ್ಯಾಸ ಮಾಡ್ತಾ ಇದ್ದವಳು, ಈ ಸಲ ಇನ್ನೊಂದು ಬಹುಮಾನ ಪಡೆಯಬೇಕು ಅನ್ನೋದು ಅವಳ ಉತ್ಕಟ ಆಸೆಯಾಗಿತ್ತು. ಅವಳ ಪ್ರಯತ್ನ ಭಗವಂತನಿಗೆ ಹಿಡಿಸಲಿಲ್ಲವೋ ಗೊತ್ತಿಲ್ಲ. ಮುಂದಿನ ರಜೆಯಲ್ಲಿ ಅಜ್ಜಿ ಮನೆಗೆ ಹೋಗಬೇಕು, ಹಿಂದಿನ ಸಲ ಕೊಯ್ಯೋದಕ್ಕೆ ಆಗದೇ ಇರೋ ಮಾವಿನಕಾಯಿಯನ್ನು ಈ ಸಲ ಕೊಯ್ಯಲೇಬೇಕು ಅಂತ ಅಂದುಕೊಂಡಿದ್ದಳು. ಆದ್ರೆ ತನ್ನ ಪ್ರಾಣ ಅರಿವಿಲ್ಲದಂತೆ ಹೋಗಿ ಬಿಡುತ್ತೇ ಅನ್ನೋದು ಆಕೆಗೆ ಗೊತ್ತಿರಲಿಲ್ಲ. ರಸ್ತೆ ದಾಟಿದ್ದು ತಪ್ಪೋ, ಗಾಡಿ ವೇಗವಾಗಿ ಬಂದದ್ದು ತಪ್ಪೋ, ಮನೆಯವರು ಶಾಲೆಯವರೆಗೂ ಬಿಡದೇ ಇರೋದು ತಪ್ಪೋ, ಮನೆಯ ಮುಂದೆನೇ ಶಾಲೆಯ ಗಾಡಿ ಬಂದು ನಿಲ್ಲದೇ ಇರೋದು ತಪ್ಪೋ, ಆದರೂ ನಿಜ ಆಕೆಯ ಉಸಿರು ನಿಂತಿದೆ ಹೋಗಿದ್ದು ಕನಸುಗಳು ಜೊತೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ