ಸ್ಟೇಟಸ್ ಕತೆಗಳು (ಭಾಗ ೭೧೩) - ಸ್ಥಳ ಕಾಲ

ಕೆಲವೊಂದು ಸಲ ಕಾಕತಾಳಿಯ ವಿಚಾರಗಳು ಕೂಡ ನಮ್ಮನ್ನ ಬದಲಾಯಿಸಿ ಬಿಡುತ್ತವೆ. ನಾನು ಇದನೆಲ್ಲ ನಂಬ್ತಾ ಇರಲಿಲ್ಲ. ಆದರೆ ಕೆಲವೊಂದು ವಿಚಾರಗಳನ್ನ ಗಮನಿಸಿದ ನಂತರ ನಂಬಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಕೆಲವೊಂದು ಸ್ಥಳಗಳು ವ್ಯಕ್ತಿಗಳ ಭವಿಷ್ಯವನ್ನೇ ಬದಲಾಯಿಸಿ ಬಿಡುತ್ತವೆ. ಸಣ್ಣದೊಂದು ಮೀನಿನ ಹೋಟೆಲ್ ಒಳ್ಳೆಯ ವ್ಯಾಪಾರ ಜನ ಅಲ್ಲಿ ಊಟ ಮಾಡುವುದಕ್ಕೆ ಬರ್ತಾ ಇದ್ದರು. ದುಡ್ಡು ಹೆಚ್ಚಾಯಿತು ಅದರ ಪಕ್ಕದಲ್ಲಿ ಅದೇ ಹೆಸರಿನ ಇನ್ನೊಂದು ಹೋಟೆಲ್ ಆದರೆ ಈ ಹೋಟೆಲಿಗೆ ಬಂದಷ್ಟು ಜನಸಂಖ್ಯೆ ಆ ಹೋಟೆಲಿಗೆ ಬರಲೇ ಇಲ್ಲ. ಇಲ್ಲಿಯ ರುಚಿ ಅಲ್ಲಿ ಸಿಗಲೇ ಇಲ್ಲ. ಜನ ಬಂದವರು ಹಳೇ ಹೋಟೆಲ್ ನಲ್ಲೇ ಕುಳಿತು ತಿನ್ನೋದಕ್ಕೆ ಇಷ್ಟಪಡುತ್ತಿದ್ದರೆ ವಿನಃ ಹೊಸ ಹೋಟೆಲಿನ ಕಡೆಗೆ ತೆರಳಲೇ ಇಲ್ಲ. ಅಲ್ಲೊಬ್ಬರು ಚಿನ್ನದ ಅಂಗಡಿ. ದೊಡ್ಡ ದೊಡ್ಡ ಅಂಗಡಿಗಳ ನಡುವೆ ಈ ಅಂಗಡಿ ಕಾಣುತ್ತಾನೆ ಇರಲಿಲ್ಲ. ಆದರೆ ಜನ ಅಲ್ಲಿಗೆ ಹುಡುಕಿ ಬರ್ತಾ ಇದ್ರು, ದಿನಗಳು ಉರುಳಿದಂತೆ ದುಡ್ಡು ಹೆಚ್ಚಾಗಿ ದೊಡ್ಡದೊಂದು ಅಂಗಡಿಯನ್ನು ಖರೀದಿಸಿ ಬಿಟ್ರು. ಕೊನೆಗೆ ಆ ಅಂಗಡಿಯ ಸಾಲವನ್ನು ತೀರಿಸೋಕ್ಕಾಗದೆ ಅದನ್ನ ಮಾರಾಟ ಮಾಡಿ ಮತ್ತೆ ಹಳೆ ಅಂಗಡಿಗೆ ಬಂದು ಬಿಟ್ರು. ಇನ್ನೊಬ್ಬರು ತಾವು ಇದ್ದ ಬಾಡಿಗೆ ಮನೆಯನ್ನ ಈ ದಿನದವರೆಗೂ ಬಿಟ್ಟು ಕೊಡಲೇ ಇಲ್ಲ.ಅಂತಹ 10 ಮನೆಗಳನ್ನ ಕಟ್ಟಿಸುವ ಶಕ್ತಿಯವರಲ್ಲಿದ್ರು ಅವರ ಬದುಕು ಬದಲಾಯಿಸಿದ ಮನೆ ಅದು ಎನ್ನುವ ಕಾರಣಕ್ಕೆ ಇನ್ನೂ ಕೂಡ ಆ ಮನೆಯನ್ನು ಹಿಡಿದುಕೊಂಡಿದ್ದಾರೆ. ಹೀಗೆ ವ್ಯಕ್ತಿಗಳ ಬದಲಾವಣೆಗೆ ಕಾಲ ಸ್ಥಳ ಮತ್ತು ಹೊಂದಾಣಿಕೆ ಆಗಲೇಬೇಕು. ಹಾಗಾದಾಗ ವ್ಯಕ್ತಿ ಎತ್ತರವನ್ನ ಏರುತ್ತಾನೆ. ನಮ್ಮ ಜೀವನದ ಎರಡು ಘಳಿಗೆಗಳು ಸೇರುವಂತಹ ಸಮಯಕ್ಕೆ ನಾವು ಕಾಯಲೇ ಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ