ಸ್ಟೇಟಸ್ ಕತೆಗಳು (ಭಾಗ ೭೨೫) - ಪಯಣ

ಸ್ಟೇಟಸ್ ಕತೆಗಳು (ಭಾಗ ೭೨೫) - ಪಯಣ

ಹೊರಡಲೇ ಬೇಕಿತ್ತು ಆ ದಿನ ಊರಿಗೆ. ಅದಕ್ಕಾಗಿ ಬಸ್ ಸ್ಟ್ಯಾಂಡಿನ ಕಡೆಗೆ ಚಲಿಸಿದೆ. ಇನ್ನೇನು ಬಸ್ ಸ್ಟ್ಯಾಂಡ್ ತಲುಪಬೇಕು ಎನ್ನುವಷ್ಟರಲ್ಲಿ ನಾನು ಮೊದಲೇ ನಿರ್ಧರಿಸಿದ್ದ ಬಸ್ಸು ಬಳಿ ಎಷ್ಟೇ ವೇಗವಾಗಿ ತಲುಪಿದರೂ ಆ ಬಸ್ಸನ್ನು ಏರೋದಕ್ಕೆ ಆಗಲಿಲ್ಲ. ಆಗಲೇ ತಲೆಯಲ್ಲಿ ಒಂದಷ್ಟು ಚಿಂತೆಗಳು ನಾನು ಈಗ ತಲುಪುವ ಸಮಯ ಬದಲಾಗುತ್ತೆ. ಅದರಿಂದ ಇನ್ನೊಂದಷ್ಟು ತೊಂದರೆಗಳು ಉಂಟಾಗುತ್ತದೆ. ಇನ್ನೊಂದಷ್ಟು ಸಮಯ ನನ್ನನ್ನು ಕಾಯಿಸಿ ಹೊರಡುವ ಇನ್ನೊಂದು ಬಸ್ಸು ಮುಂದೆ ಬಂದು ನಿಂತಿತ್ತು. ನನಗೆ ತಲುಪಬೇಕಾದ ಅನಿವಾರ್ಯತೆ. ಹಾಗಾಗಿ  ಆ ಬಸ್ಸಲ್ಲಿ ಚಲಿಸುತ್ತಿದ್ದವನಿಗೆ ಪಕ್ಕದಲ್ಲಿ ಕುಳಿತ ಅದ್ಭುತ ವ್ಯಕ್ತಿತ್ವದ ಪರಿಚಯ ಆಯ್ತು. ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಮನೆಯ ಒಂದಿಬ್ಬರು ನನ್ನ ಜೊತೆಗೆ ಅಲ್ಲೇ ನಿಂತಿದ್ದರು. ದಾರಿಯಲ್ಲಿ ಹೊಸ ಗೆಳೆಯ, ನಾನು ಓದಿದ ಹಳೆಯ ಶಾಲೆಯ ಟೀಚರು, ಒಂದಷ್ಟು ಸಲ ಜಗಳ ಆಡಿಕೊಂಡು ಕೋಪದಿಂದ ಮುಖ ತಿರುಗಿಸಿಕೊಂಡಿದ್ದ ಇಬ್ಬರು ಸ್ನೇಹಿತರು ಎಲ್ಲರೂ ಪರಸ್ಪರ ಕುಶಲೋಪರಿ ಮಾತನಾಡಿಕೊಂಡು ನಮ್ಮ ನಮ್ಮ ದಿಕ್ಕಿನ ಕಡೆಗೆ ಸಾಗಿಬಿಟ್ಟೆವು. ಇದೆಲ್ಲವೂ ಸಾಧ್ಯವಾದದ್ದು ಆ ತಪ್ಪಿದ ಒಂದು ಬಸ್ಸಿನಿಂದ. ಹಾಗಾಗಿ ನನಗೆ ಆ ತಪ್ಪಿದ ಬಸ್ಸೇ ಜೀವನದ ದೊಡ್ಡ ಪಾಠವನ್ನು ಹೇಳಿಕೊಟ್ಟಿತು. ಅವಕಾಶ ಒಂದು ಕೈ ತಪ್ಪಿದೆ ಎಂದು ಚಿಂತಿಸಿ ಕುಳಿತುಕೊಳ್ಳುವುದಕ್ಕಿಂತ ಸಿಕ್ಕ ಇನ್ನೊಂದು ಅವಕಾಶವನ್ನು ಬಳಸಿಕೊಂಡಾಗ ಮೊದಲಿಗಿಂತಲೂ ಅದ್ಭುತವಾದ ಯಶಸ್ಸು ಕಣ್ಣ ಮುಂದೆ ಖಂಡಿತವಾಗಿಯೂ ಸಿಗುತ್ತದೆ. ಕಾಯುವ ತಾಳ್ಮೆ ಸತತ ಪರಿಶ್ರಮ ಜೊತೆಗಿರಬೇಕಷ್ಟೇ.   

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ