ಸ್ಟೇಟಸ್ ಕತೆಗಳು (ಭಾಗ ೭೩೫) - ಬೀದಿಗಳು
ಆ ಊರಿನ ಬೀದಿಗಳಿಗೆ ಉಸಿರು ತಡೆಯೋಕೆ ಆಗ್ತಾ ಇಲ್ಲ. ನೆಮ್ಮದಿಯಾಗಿ ಉಸಿರಾಡುವ ಯಾವ ಪರಿಸ್ಥಿತಿಯೂ ಅಲ್ಲಿಲ್ಲ. ಆ ಬೀದಿಗಳು ಬಯಸಿದ್ದವು. ಈ ಊರಲ್ಲಿ ಮನೆಗಳು ಹೆಚ್ಚಾಗಿದ್ದಾವೇ ಆ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳ ಹೆಜ್ಜೆಗಳು ದೊಡ್ಡವರ ದೊಡ್ದ ಚಿಂತನೆಯ ಹೆಜ್ಜೆಗಳು ಇಲ್ಲಿ ಓಡಾಡುತ್ತವೆ ಎಲ್ಲರೂ ಹೊಸ ಕನಸುಗಳು ಹೊಸ ಆಲೋಚನೆಗಳೊಂದಿಗೆ ಈ ನೆಲದ ಮೇಲೆ ನಡೆದಾಡುತ್ತಾರೆ ಆಗ ನೆಮ್ಮದಿಯ ಸಾರ್ಥಕ ಭಾವ ಈ ಬೀದಿಯಲ್ಲಿ ಕುಣಿದಾಡುತ್ತಿರುತ್ತದೆ ಎಂದು. ಆದರೆ ಆಲೋಚನೆಗಳು ದೊಡ್ಡದಾಗದೆ ಎಲ್ಲವೂ ಸಂಕುಚಿತಗೊಂಡು ದುಷ್ಟ ಮನಸ್ಸು ಹೊಂದಿರುವ ಕೆಟ್ಟ ಆಲೋಚನೆಗಳು, ಇನ್ನೊಬ್ಬರಿಗೆ ಅಹಿತವನ್ನೇ ಬಯಸುವ ಹೆಜ್ಜೆಗಳೇ ಹೆಚ್ಚು ಓಡಾಡೋದಕ್ಕೆ ಆರಂಭವಾದವು. ಹಲವು ಸಾವು ನೋವುಗಳು ಉಂಟಾದವು. ಹೆಣ್ಣಿನ ಬಗ್ಗೆ ನಿಕೃಷ್ಟ ಭಾವನೆ, ಕೆಟ್ಟ ಮಾತುಗಳು, ಹರಿಯುತ್ತಿರುವ ರಕ್ತದ ಕೋಡಿಗಳು, ಅನಗತ್ಯವಾಗಿ ಯಾರದೋ ಮಾತಿಗೆ ಪ್ರಭಾವಗೊಂಡು ಯಾರನ್ನು ಸಾಯಿಸುವ ಕೆಟ್ಟ ಯೋಚನೆಯ ಮನಸ್ಸಿನ ಒಳಗಿನ ಹುಳುಕುಗಳು, ಎಲ್ಲವೂ ಆ ನೆಲವನ್ನ ಉಸಿರು ಗಟ್ಟುವಂತೆ ಮಾಡುತ್ತಿವೆ. ಹಾಗಾಗಿ ಆ ಬೀದಿ ನರಳುತ್ತಿದೆ. ಆ ಬೀದಿ ದೈನದಿಂದ ಬೇಡುತ್ತಿದೆ ನೀವು ಆಗಾಗ ಆಚರಿಸುವ ಬೇರೆ ಬೇರೆ ಧರ್ಮದ ಆಚರಣೆಗಳನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಆಸೆ ಇದ್ದರೂ ಯಾವಾಗ ಅನಾಹುತ ಘಟಿಸಿ ಯಾರಿಗೆ ಏನಾಗುತ್ತೋ ಅನ್ನೋ ಭಯದಿಂದ ಕಣ್ಮುಚ್ಚಿ ಕುಳಿತುಕೊಂಡಿದ್ದೇನೆ. ಒಮ್ಮೆ ಬದಲಾಗಿ ಈ ನೆಲದ ಆ ಸತ್ವದ ಮನಸ್ಸನ್ನು ಅರ್ಥ ಮಾಡಿಕೊಂಡು ಪ್ರೀತಿಯ ಹೃದಯವನ್ನು ತೆರೆದು ನೋಡಿ ಎಲ್ಲರೊಂದಿಗೆ ಕೈಜೋಡಿಸಿ ನಡೆಯುವಂತವರಾಗಿ ಆಗ ಈ ಬೀದಿಯು ನಲಿದಾಡುತ್ತದೆ. ನಗುತ್ತದೆ ನೆಮ್ಮದಿಯಲ್ಲಿ ಉಸಿರಾಡುತ್ತದೆ. ಹಾಗಾಗಿ ನಾವು ಹೆಜ್ಜೆ ಇಡುವಾಗ ಜಾಗೃತೆ ವಹಿಸಬೇಕು. ಬೀದಿಯನ್ನು ನಗಿಸಬೇಕೋ ನರಳಿಸಬೇಕೋ ಅಂತ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ