ಸ್ಟೇಟಸ್ ಕತೆಗಳು (ಭಾಗ ೭೩೯) - ಅನುವಾದ
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%85%E0%B2%A8%E0%B3%81%E0%B2%B5%E0%B2%A6.jpg?itok=MF0Onk-v)
ನಾನು ಅನುವಾದಗಳನ್ನು ಅಲ್ಲಲ್ಲಿ ಓದುತ್ತಿರುತ್ತೇನೆ. ಆದರೆ ನನ್ನ ಬದುಕನ್ನ ಅನುವಾದ ಮಾಡಿಕೊಳ್ಳುವುದು ಹೇಗೆ ಅಂತ ತುಂಬಾ ದಿನದಿಂದ ಪ್ರಯತ್ನ ಪಡ್ತಾ ಇದ್ದೇನೆ. ಅನುವಾದ ಹೇಗಾಗಬೇಕು ಭಾಷಾನುವಾದವಾಗಬೇಕೋ ಅಥವಾ ಭಾವಾನುವಾದಾಗಬೇಕೋ. ಭಾಷಾನುವಾದವಾದರೆ ಇನ್ನೊಬ್ಬರನ್ನು ನೋಡಿ ಅವರನ್ನು ಅನುಕರಣೆ ಮಾಡ್ತಾ ಹೋಗೋದೋ ಅಥವಾ ಇನ್ನೊಬ್ಬರನ್ನು ನೋಡಿ ಅವರಿಂದ ಒಳಿತಿನ ವಿಚಾರಗಳನ್ನು ಪಡೆದುಕೊಂಡು ನನ್ನ ಜೀವನದಲ್ಲಿ ಅದನ್ನ ಅಳವಡಿಸಿಕೊಂಡು ನನ್ನ ಬದುಕಿಗೆ ಬೇಕಾಗುವ ರೀತಿಯಲ್ಲಿ ಒಗ್ಗಿಸಿಕೊಂಡು ಮುಂದುವರೆದರೆ ಅದು ಭಾವಾನುವಾದ ಆಗುತ್ತೆ. ಹಾಗಾಗಿ ಯಾವ ಅನುವಾದ ಹೆಚ್ಚು ಪ್ರಾಶಸ್ತ್ಯವನ್ನು ಪಡಿತದೆ ಅಂತ ಗೊತ್ತಾಗುತ್ತೆ. ಕೆಲವೊಂದು ಸಲ ನಮ್ಮನ್ನ ನೇರವಾಗಿ ಅರ್ಥಮಾಡಿಕೊಳ್ಳುವವರು ಸಿಕ್ತಾರೆ. ಕೆಲವರು ಅವರಿಗಿಷ್ಟ ಬಂದ ರೀತಿಯಲ್ಲಿ ನಮ್ಮನ್ನ ಅನುವಾದವು ಮಾಡಿಕೊಂಡಿರುತ್ತಾರೆ. ಅನುವಾದವು ನಾವಲ್ಲದ ರೀತಿಯಲ್ಲಿ ಆದಾಗ ಮಾತ್ರ ಒಂದಿಷ್ಟು ಸಮಸ್ಯೆಗಳಾಗುತ್ತೆ. ವ್ಯಕ್ತಿಯೊಬ್ಬನ ಮನಸ್ಸಿನ ಭಾವಗಳು ಹೊರ ಜಗತ್ತಿಗೆ ನೇರವಾಗಿ ಅನುವಾದವಾದರೆ ಎಷ್ಟೊಂದು ಸುಂದರ ಅಲ್ಲವೇ? ಹಾಗಾಗಿ ಅನುವಾದದ ಹುಡುಕಾಟದಲ್ಲಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ