ಸ್ಟೇಟಸ್ ಕತೆಗಳು (ಭಾಗ ೭೪೪) - ಕಾಲದ ಕತೆ
ಆ ದಿನ ಬೆಳಗ್ಗೆ ಅಜ್ಜಿಯ ಕಣ್ಣಲ್ಲಿ ಕಣ್ಣೀರು. ಮತ್ತೆ ಮತ್ತೆ ಒಂದೇ ಮಾತನ್ನ ಪುನರುಚ್ಚರಿಸುತ್ತಿದ್ದಾರೆ. ಆ ಸಾಲ ವಾಪಸು ಕೊಡಲೇಬೇಕು? ಅವರನ್ನು ಹುಡುಕಿ ವಾಪಸು ಕೊಡಲೇಬೇಕು? ಋಣವನ್ನು ಜೀವನದ ಕೊನೆಯವರೆಗೂ ಕೊಂಡೊಯ್ಯುವ ಹಾಗಿಲ್ಲ. ಇದೇ ಮಾತು ಪ್ರತಿದಿನ ಬೆಳಗ್ಗೆ ಕೇಳುತ್ತಿದೆ. ವಿಷಯವೇನೆಂದು ಕೇಳಿ ಕೇಳಿ ಕೊನೆಗೊಂದು ಸಲ ಅಜ್ಜಿ ಹೇಳಿದರು." ನಿನ್ನ ಅಮ್ಮನ ಮದುವೆಗೆ ನಿನ್ನಜ್ಜ ಕೆಲಸ ಮಾಡುತ್ತಿದ್ದ ಯಜಮಾನರ ಬಳಿ 5,000 ಸಾಲ ತೆಗೆದುಕೊಂಡಿದ್ದರು. ಮತ್ತೆ ಕಾಲಗಳು ಕಳೆದ ಹಾಗೆ ಅದು ನೆನಪಿನ ಬುತ್ತಿಯಿಂದ ಜಾರಿ ಮರೆಯಾಗಿ ಹೋಯಿತು. ಈಗ ಮತ್ತೆ ಆ ಸಾಲ ಮನಸ್ಸನ್ನು ಕಸಿವಿಸಿಗೊಳಿಸುತ್ತಿದೆ. ಅವರನ್ನು ಹುಡುಕಿ ಸಾಲವನ್ನು ತೀರಿಸಲೇಬೇಕು. ಪಯಣ ಆರಂಭವಾಯಿತು ಹೆಸರು ಊರು ಅಂಗಡಿಗಳನ್ನ ತಿಳಿದು ಅವರನ್ನು ಹುಡುಕುವ ಪ್ರಯತ್ನ ಆರಂಭವಾಗುತ್ತಾ ಹೋದ ಹಾಗೆ ಅವರ ಬದುಕಿನ ಬಗ್ಗೆ ಯಾವ ಸುಳಿವು ಸಿಗುತ್ತಾ ಇಲ್ಲ. ಅಜ್ಜಿಯ ಬಾಯಿಂದ ಸಿಕ್ಕ ಸುಳಿವು "ಮದುವೆ ಸಾಲ ತೆಗೆದುಕೊಳ್ಳುವಾಗ ಅವರ ಮಗನ ವರ್ಷ 3 "ಹಾಗಿದ್ದಾಗ ಈಗ ಅವರ ಪ್ರಾಯ 34 ರಿಂದ 35 ವರ್ಷದ ಮಗನಿರಬೇಕು. ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಮಾತನಾಡಿದಾಗ ಈ ಒಂದು ಸಾಲ ತಿರುಗಿ ಬರಬಹುದು ಅನ್ನುವ ಯೋಚನೆಯೂ ಅವರಿಗೆ ಇರಲಿಲ್ಲ. ಬಾಂಧವ್ಯ ಗಟ್ಟಿಯಾಯಿತು ಸಂಬಂಧದ ಹೊಸತೊಂದು ಕೊಂಡಿ ಜೋಡಣೆ ಆಯಿತು. ಮರೆವು ಸಹಜ ಗುಣವಂತೆ ಆದರೆ ಕೆಲವೊಂದು ನೆನಪುಗಳು ನೆನಪಾದಾಗ ಮಾತ್ರ ಬದುಕು ನಮ್ಮನ್ನ ಚಕಿತಗೊಳಿಸುತ್ತದೆ. ಸಂಬಂಧದ ಇನ್ನೊಂದು ಕೊಂಡಿ ಜೋಡಣೆಯಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ