ಸ್ಟೇಟಸ್ ಕತೆಗಳು (ಭಾಗ ೭೪೮) - ಕೆರೆ

ಸ್ಟೇಟಸ್ ಕತೆಗಳು (ಭಾಗ ೭೪೮) - ಕೆರೆ

ಅಲ್ಲೇ ಕಿಟಕಿಯ ಹೊರಗೆ ಕಂಡ ಕಥೆಯನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ. ಪುಟ್ಟದಾದ ಕೆರೆ. ಕೆರೆ ಎನ್ನುವುದಕ್ಕಿಂತ ನೀರು ನಿಂತ ಜಾಗ ಅನ್ನಬಹುದೇನೋ? ಒಂದಷ್ಟು ಕೊಳಚೆಗಳು ಸೇರಿಕೊಂಡು ಶುದ್ಧವಾಗಿದ್ದ ಕೆರೆ. ಈಗ ಬಣ್ಣ ಕಳೆದುಕೊಂಡು ಮಲಿನವಾಗಿದೆ. ಅಲ್ಲಿ ಇತ್ತೀಚಿಗೆ ಕೆಲವು ದಿನಗಳಿಂದ ಎರಡು ಮೀನುಗಳು ಬದುಕೋಕೆ ಆರಂಭ ಮಾಡಿದ್ದಾವೆ. ದಿನ ಬೆಳಗಾದ್ರೆ ಸಾಕು. ಇಡೀ ಕೆರೆ ತುಂಬಾ ಓಡಾಡ್ತಾ ಓಡಾಡ್ತಾ ಮಲಿನಗಳನ್ನ ಬದಿಗೆ ಸರಿಸಿ ಕೆರೆಯನ್ನು ತಿಳಿಯಾಗಿಸುವಲ್ಲಿ ಶ್ರಮವಹಿಸುತ್ತವೆ. ಎತ್ತರದಲ್ಲಿ ಯಾವುದಾದರೂ ಪಕ್ಷಿ ತಮ್ಮ ಮೇಲೆ ಆಕ್ರಮಣ ಮಾಡುವುದು ಕಂಡು ಬಂದರೆ ಹಾಗೆಯೇ  ಕೊಳಚೆಯೊಳಗೆ ಮುಳುಗಿ ಮರೆಯಾಗುತ್ತವೆ. ದಿನವೂ ಅದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೂ ಕೂಡ ಮರುದಿನ ಬೆಳಗ್ಗೆ ಮತ್ತೆ ಕೊಳಚೆಯಾಗಿರುವ ಕೆರೆಯನ್ನ ಶುದ್ಧ ಮಾಡುವುದನ್ನು ಕಾಯಕವಾಗಿಸಿಕೊಂಡಿದೆ. ಒಂದಷ್ಟು ಒತ್ತಡದ ನಡುವೆ ಆ ಕಿಟಕಿಯಿಂದ ಗಮನಿಸುವುದಕ್ಕಾಗಿಲ್ಲ. ಆದರೆ ಕೆಲವು ದಿನಗಳಿಂದ ಆ ಕೆರೆ ಸ್ವಚ್ಛವಾಗಿಲ್ಲದೇ ಇರುವುದನ್ನು ಕಾಣುತ್ತಿದ್ದೇನೆ. ಮೀನುಗಳು ಎಲ್ಲಿವೆ. ಆ ಪುಟ್ಟ ಮೀನುಗಳು ಆಕ್ರಮಣಕ್ಕೆ ಒಳಗಾಗಿದ್ದವೋ? ಸತ್ತು ಹೋಗಿದ್ದವೋ? ಗೊತ್ತಿಲ್ಲ. ಮಾಡಿದ ಕೆಲಸವನ್ನೇ ಮತ್ತೆ ಮಾಡಿದ ಕಾರಣ ಹೊಸ ಕೆಲಸದ ಕಡೆಗೆ ಮನಸ್ಸು ಮಾಡಿ ಇನ್ನೊಂದು ಕೆರೆಯನ್ನು  ಆಶ್ರಯಿಸಿದವೋ ಅದೂ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಈಗ ಕೆರೆ ಸ್ವಚ್ಛವಾಗುತ್ತಿಲ್ಲ. ದಿನವೂ ಕಿಟಕಿಯ ಹೊರಗೆ ಕಾಣುತ್ತಿದ್ದ ಪುಟ್ಟದೊಂದು ಜಗತ್ತು ಮಾಯವಾಗಿಬಿಟ್ಟಿದೆ. ಉತ್ತರ ಸಿಗುವವರೆಗೂ ಪ್ರಶ್ನೆ ಮನದಲ್ಲಿ ಹಾಗೆ ಉಳಿದುಕೊಂಡು ಬಿಡುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ