ಸ್ಟೇಟಸ್ ಕತೆಗಳು (ಭಾಗ ೭೫೦) - ವಿಪರ್ಯಾಸಪುರ
ಆ ಊರಿನ ಹೆಸರು ವಿಪರ್ಯಾಸಪುರ. ವಿಪರ್ಯಾಸಪುರಕ್ಕೆ ಆ ಹೆಸರು ಯಾಕೆ ಬಂದಿದೆ ಅಂತ ಅಂದ್ರೆ ನಿಮಗೆ ಒಂದೊಂದೇ ಉದಾಹರಣೆಗಳನ್ನು ಕೊಡುತ್ತೇನೆ. ಆ ಊರಲ್ಲಿ ದೊಡ್ಡದಾದ ಕಾಡಿತ್ತು. ಇತೀಚೆಗೆ ಅಲ್ಲಿ ಕೆಲವರು ಕಾಡು ಕಡಿದು ಮನೆ ಮಾಡಿ ಸುತ್ತಮುತ್ತ ಮನೆಯ ಅಂದಕ್ಕೋಸ್ಕರ ಒಂದಷ್ಟು ಹೂ ಬಿಡುವ ಗಿಡಗಳನ್ನು ನೆಟ್ಟು ಇನ್ನೊಂದಿಷ್ಟು ಗಿಡಗಳನ್ನು ಬೆಳೆಸುವುದಕ್ಕೆ ಆರಂಭ ಮಾಡಿದರು. ಅವರಿಗೆ ಪರಿಸರ ಪ್ರೇಮಿ ಅನ್ನುವ ಬಿರುದು ಸಿಕ್ಕಿತು. ಸರಕಾರ ಮನೆಗಳ ಸುತ್ತಮುತ್ತ ನಿರ್ಮಿಸುವುದಕ್ಕೆ ಅಂತ ಕೊಟ್ಟ ಚರಂಡಿ ಹಣದಿಂದ ಊರಿನ ನಾಯಕನ ಸಣ್ಣದೊಂದು ಮನೆಯ ಒಂದು ಅಂತಸ್ತು ತಯಾರಾಯಿತು. ಜೋರು ಮಳೆ ಬಂದಾಗ ನೀರು ರಸ್ತೆ ಮೇಲೆ ಓಡಾಡಿ ಬಡವನ ಮನೆಗೆ ನಷ್ಟವಾಯಿತು. ನೀರುಳಿಸಬೇಕು ಅಂತ ಭಾಷಣ ಮಾಡುವವರು ಮನೆಯಲ್ಲಿ ನೀರಿಂಗಿಸುವ ಯಾವ ಕಾರ್ಯವನ್ನೂ ಹಮ್ಮಿಕೊಳ್ಳಲಿಲ್ಲ. ಸಾವಯವ ಗೊಬ್ಬರದಿಂದಲೇ ಆರೋಗ್ಯ ಎನ್ನುವವರು ಅಂಗಳದ ಮುಂದಿನದ ಬೆಂಡೆಕಾಯಿ ಗಿಡಕ್ಕೆ ಹೆಚ್ಚಿನ ಫಲ ಬರುವುದಕ್ಕೆ ರಾಸಾಯನಿಕಗಳನ್ನು ತಂದಿಟ್ಟಿದ್ದಾರೆ. ತಂದೆ ತಾಯಿ ದೇವರು ಅನ್ನೋದನ್ನು ಗಾಡಿಯ ಮುಂಬಾಗದಲ್ಲಿ ದೊಡ್ಡಕ್ಷರದಲ್ಲಿ ಬರೆದಿರುವವರು ಆ ದಿನ ಸಂಜೆ ಅನಾಥಾಶ್ರಮದಲ್ಲಿರುವ ಅಮ್ಮನಿಗೆ ತಿಂಡಿ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿದ್ದರು. ಒಂದಷ್ಟು ಕೋಟಿ ವೆಚ್ಚ ಮಾಡಿ ದೊಡ್ಡದೊಂದು ಆಸ್ಪತ್ರೆಯನ್ನು ಕಟ್ಟಿ ಉದ್ಘಾಟನೆಯನ್ನು ಮಾಡಿ ಚುನಾವಣೆಯಲ್ಲಿ ಗೆದ್ದವರು ಹುಷಾರು ತಪ್ಪಿದಾಗ ದೊಡ್ದ ಊರಿನ ಕಡೆಗೆ ನಡೆದೇ ಬಿಟ್ಟರು. ಹೀಗೆ ಇಡೀ ಊರಿನಲ್ಲಿ ವಿಪರ್ಯಾಸಗಳೇ ಬದುಕುವುದಕ್ಕೆ ಆರಂಭ ಮಾಡಿವೆ.. ನಮ್ಮ ಊರಿನಲ್ಲೂ ವಿಪರ್ಯಾಸಗಳು ಹೆಜ್ಜೆ ಇಟ್ಟಿವೆ. ಜಾಗ್ರತೆ ಆಮೇಲೆ ಊರಿನ ಹೆಸರೇ ಬದಲಾದೀತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ