ಸ್ಟೇಟಸ್ ಕತೆಗಳು (ಭಾಗ ೭೫೬) - ಪ್ರಕ್ಷುಬ್ಧ
ಹಾಗೆ ಹೊತ್ತು ಕಳೆಯುವುದಕ್ಕೆ ಸಮುದ್ರ ತೀರದ ಬಳಿ ಸುಮ್ಮನೆ ನಿಂತಿದ್ದೆ. ಏನೋ ಮನಸಾಯ್ತು ಒಂದಷ್ಟು ಸಮುದ್ರದ ಜೊತೆ ಆಟವಾಡೋಣ ಎಂದುಕೊಂಡು ಅಲೆಗಳು ತುದಿ ತಲುಪುವಾಗ ಕಾಲನ್ನು ಒಂದಿಷ್ಟು ಇಳಿಬಿಟ್ಟು ಹಾಗೆ ಆಡುತ್ತಿದ್ದೆ. ಆದರೆ ಕೆಲವು ಕ್ಷಣಗಳು ದಾಟಿದ್ದಷ್ಟೇ. ಅಲೆಗಳು ಹೆಚ್ಚು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ನನ್ನ ಪಾದವನ್ನು ದಾಟಿ ಇನ್ನೂ ಮುಂದಕ್ಕೆ ಮುಂದುವರೆಯುವುದಕ್ಕೆ ಪ್ರಾರಂಭವಾದವು. ಕಡಲು ಏನನ್ನೋ ಮಾತನಾಡುತ್ತಿತ್ತು. ಅದರ ಒಡಲೊಳಗೆ ಅವಿತಿದ್ದ ನಿಗೂಡ ಸತ್ಯ ನನ್ನನ್ನು ಅದರ ಒಡಲೊಳಗೆ ಸೆಳೆಯಳು ಕಾಯುತ್ತಿತ್ತು. ಅಲೆಗಳು ದೊಡ್ಡದಾಗುತ್ತ ನನ್ನನ್ನ ಹೆಚ್ಚು ಹೆಚ್ಚು ಆವರಿಸಿಕೊಳ್ಳುವುದಕ್ಕ ಆರಂಭಿಸಿದವು. ನಾನು ಗಟ್ಟಿಯಾಗಿ ನಿಂತಿದ್ದಕ್ಕೆ ಅಷ್ಟು ಸುಲಭಕ್ಕೆ ಎಳೆದುಕೊಳ್ಳಲಾಗಲಿಲ್ಲ. ಆದರೆ ಅದು ಸಮುದ್ರ ಬಿಡಬೇಕಲ್ವಾ ಮತ್ತೆ ಮತ್ತೆ ದೊಡ್ಡ ದೊಡ್ಡ ಪ್ರಯತ್ನಗಳು. ನನಗೆ ಏನೋ ಅವಘಡವಾಗುವ ಸೂಚನೆ ಮೊದಲೇ ಸಿಕ್ಕಿದ್ದರಿಂದ ಅಲ್ಲಿಂದ ಹೊರಗೆ ಬಂದುಬಿಟ್ಟೆ. ಮತ್ತೊಂದು ಜೋರಾದ ಅಲೆ ಸಿಟ್ಟಿನಿಂದಲೂ ಏನೋ ವೇಗವಾಗಿ ನುಗ್ಗಿ ಬಂತು ತೀರಕ್ಕೆ. ನಾನು ಹತ್ತಿರವಿರದ ಕಾರಣ ಬದುಕಿಕೊಂಡು ಬಿಟ್ಟೆ .ಸಮುದ್ರಕ್ಕೆ ನನ್ನ ಮೇಲೆ ಏನೋ ಸಿಟ್ಟಿತ್ತು ಅಥವಾ ಈ ಮನುಷ್ಯರ ಮೇಲೆ ಏನೋ ಸಿಟ್ಟಿರಬಹುದು. ನಾನು ಆ ಸಮುದ್ರವನ್ನು ಅಪವಿತ್ರಗೊಳಿಸಿದೆನೋ ಅಥವಾ ಗೌರವ ನೀಡಲಿಲ್ಲವೋ. ಒಟ್ಟಿನಲ್ಲಿ ಏನೋ ತಪ್ಪಾಗಿದೆ. ಆದರೆ ನಾನು ಪ್ರತಿದಿನ ದೂರದಲ್ಲಿ ನಿಂತು ನೋಡುವ ಸಮುದ್ರ ಆಗಿರಲಿಲ್ಲ ಅದು. ಪ್ರಕ್ಷುಬ್ಧಗೊಂಡಿತು ಕೆಲವೊಂದು ಮನಸ್ಸುಗಳ ತರಹ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ