ಸ್ಟೇಟಸ್ ಕತೆಗಳು (ಭಾಗ ೭೬೫) - ಉತ್ತರ
ಆ ಕ್ಷಣದ ತೀವ್ರತೆಗೆ ಮತ್ತೇನು ಮಾಡುವುದೇ ಗೊತ್ತಾಗ್ಲಿಲ್ಲ. ಆಗಷ್ಟೇ ಮನೆಗೆ ತಲುಪುತ್ತಿದ್ದೇನೆ ಎನ್ನುವ ಕರೆಯನ್ನ ಮಾತನಾಡಿ ನಿಲ್ಲಿಸಿಯಾಗಿತ್ತು. ಮನೆಯಲ್ಲಿ ಹಬ್ಬದ ಅಡುಗೆಯ ಸುದ್ದಿ ಕಿವಿಗೆ ಬಿದ್ದು ಹೊಟ್ಟೆಯೊಳಗೆ ಹಸಿವಿನ ನರ್ತನವಾಗ್ತಾ ಇತ್ತು. ಸಂಜೆ ಭೇಟಿಯಾಗುವ ಗೆಳೆಯರ ಬಗ್ಗೆ ತಿಳಿದು ಮನಸ್ಸು ಮನುಸೂರೆಗೊಂಡಿತ್ತು. ಹಲವು ಕನಸುಗಳು ಬದುಕಿನ ಆಸೆಗಳು ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದವು. ಹಾಗೆ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದಾಗ ದಾರಿ ತಪ್ಪಿದ ಕಾರು ಒಂದು ವೇಗವಾಗಿ ಬಂದು ದೇಹಗಳನ್ನ ನೆಲದಿಂದ ಮೇಲಕ್ಕೆ ಧರಿಸಿ ಒಂದು ದೇಹದ ಜೀವವನ್ನು ಜೊತೆಗೆ ಕೊಂಡೊಯ್ದಿತ್ತು. ಏನಾಯ್ತು ಎಂದು ಯೋಚಿಸುವಷ್ಟರಲ್ಲಿ ಉಸಿರು ನಿಂತು ಹೋಗಿತ್ತು. ರಕ್ತ ನೆಲವನ್ನ ಕಂಡಿತ್ತು. ತಪ್ಪಾಯ್ತು ಕ್ಷಮೆ ಇರಲಿ ಅನ್ನುವ ಮಾತು ಬಿಟ್ಟು ಬೇರೇನು ತಪ್ಪಿತಸ್ಥರ ಕಡೆಯಿಂದ ಕೇಳಿ ಬರಲೇ ಇಲ್ಲ. ಸಾವುಗಳು ರಸ್ತೆ ತುಂಬೆಲ್ಲಾ ಓಡಾಡುತ್ತಿವೆ. ತಪ್ಪು ಮಾಡುವವರಿಗೆ ಬದುಕಿನ ಬಗ್ಗೆ ಭಯವಿಲ್ಲ. ಹಾಗಾಗಿ ಸದ್ಯಕ್ಕೆ ಬೇಕಾಗಿರೋದು ನ್ಯಾಯ. ಸಾವಿಗೆ, ಮನೆಯ ಮೌನಕ್ಕೆ ಉತ್ತರ. ಎಲ್ಲರೂ ಪ್ರಶ್ನೆಗಳ ಹಿಡಿದರೆ ಉತ್ತರಿಸುವವರು ಯಾರು?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ