ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ. ಚಿನ್ನವನ್ನು ಚೆಂದಗಾಣಿಸುವ ಕುಟುಂಬ ಕಾಯಕ. ಶಿಖರದ ಮೇರು ತುದಿಯಲ್ಲಿ ಮಿನುಗುತ್ತಿದ್ದಂತಿದ್ದ ಕೆಲಸ ಭೀಮಕಾಯದ ಆಭರಣ ಕಂಪನಿಗಳ ನೆರಳಿನಲ್ಲಿ ಮರೆಯಾಯಿತು. ಈ ಹುಡುಗನ ಅಪ್ಪ ದೊಡ್ಡಪ್ಪ ಮೌನ ತಾಳಿದರು .

ಹುಡುಗ ತನ್ನ  ಆಸೆ ಕನಸುಗಳ ಚಿಗುರನ್ನು ತಾನೇ ಸ್ವತಃ ತನ್ನ ಕೈಯಾರೆ ಚಿವುಟಿದನು. ಆದರೂ ನಗುವನ್ನ ಮರೆಯಲಿಲ್ಲ. ಮಧ್ಯಮ ವರ್ಗವೆಂದರೆ ಹಾಗೆ ಆರಕ್ಕೇರದೆ ಮೂರಕ್ಕಿಳಿಯದ ಬದುಕು. ದಾರಿಹೋಕರು " ಏನಯ್ಯ ನಿನ್ನ ಬದುಕು ಅದ್ಭುತ" ಅಂದು  ಸಾಗುತ್ತಾರೆ. ಕಣ್ಣೊಳಗೆ ಜಿನುಗಿದ ನೀರನ್ನು ಹಿಡಿದಿಟ್ಟು ಹಸಿವನ್ನು ನುಂಗಿ ಹೆಜ್ಜೆ ಹಾಕಬೇಕಾದವರೇ ಮಧ್ಯಮವರ್ಗದವರು. 

ಅವನ ಆಸೆಯೊಂದೇ, ಈ ಕುಟುಂಬ ಹೀಗೆ ಉಳಿಯಬೇಕು, ದುಬಾರಿ ಶಿಕ್ಷಣವ‌ ಮುಗಿಸಿ ಕೆಲಸವನ್ನರಸಿ ಮನೆಗೆ ಆಧಾರವಾಗಬೇಕು. ಅಪ್ಪನ ಉಸಿರಿಗೆ ಜೊತೆಯಾಗ ಬೇಕು. ತಂಗಿಯ ಶಿಕ್ಷಣವ ನನಸಾಗಿಸಬೇಕು. ಕಾಯುತ್ತಿದ್ದಾನೆ ಕಾಲಕ್ಕೆ, ಗಡಿಯಾರದ ಟಿಕ್ ಟಿಕ್ ನಿಧಾನವಾಗಿ ಕೇಳುತ್ತಿದೆ. ಕ್ಯಾಲೆಂಡರ್ ದಿನಗಳನ್ನು ಮುಗಿಸಿ ಅವನ ಸಂತಸದ ಬದುಕನ್ನ ನೀಡಲು ತುದಿಗಾಲಲ್ಲಿ ನಿಂತಿದೆ .

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ