ಸ್ಟೇಟಸ್ ಕತೆಗಳು (ಭಾಗ ೭೮೨) - ಹೀಗೂ

ಸ್ಟೇಟಸ್ ಕತೆಗಳು (ಭಾಗ ೭೮೨) - ಹೀಗೂ

ಅವರ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಬದುಕುವ ಮನೆ ಒಳಗೆ ಪುಟ್ಟ ಮನಸ್ಸು, ಒಳಗೆ ಸಣ್ಣ ಕನಸುಗಳೊಂದಿಗೆ ಜೀವನ ಸಾಗಿಸ್ತಾ ಇದ್ದಾರೆ. ಅವರು ಜೋರಾಗಿ ಎದ್ದು ಬರುವ ಅಲೆಗಳಿರುವ ಸಮುದ್ರಗಳನ್ನ ಹತ್ತಿರದಿಂದ ಕಂಡಿಲ್ಲ, ಆಕಾಶದಲ್ಲಿ ಹಾರುವ ವಿಮಾನಗಳನ್ನು ಹತ್ತಿರದಿಂದ ಕಣ್ಣರಳಿಸಿ ನೋಡಲಿಲ್ಲ, ಚಲನಚಿತ್ರಗಳನ್ನ ದೊಡ್ಡ ಪರದೇ ಒಳಗೆ ನೋಡುವ ಸಂಭ್ರಮವನ್ನು ಅನುಭವಿಸಿಲ್ಲ, ದೊಡ್ಡ ಹೋಟೆಲ್ ಒಂದರಲ್ಲಿ ಕುಳಿತು ಹೊಟ್ಟೆ ತುಂಬಾ ಊಟ ಮಾಡುವ ಯೋಚನೆ ಅವರಲ್ಲಿಲ್ಲ, ದೇವಸ್ಥಾನಗಳನ್ನ ಸುತ್ತುವ ಪ್ರತಿ ಊರಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವ ಆಸೆಯೂ ಅವರಲ್ಲಿಲ್ಲ, ಮನೆಯ ಮಕ್ಕಳೊಂದಿಗೆ ಊರ ಪರಿಚಯಸ್ಥರೊಂದಿಗೆ ನೆಮ್ಮದಿಯ ಬದುಕೊಂದೇ ಅವರ ಜೀವನ. ದೇಶ ಸುತ್ತು ಕೋಶ ಓದು ಅನ್ನೋದು ದೊಡ್ಡವರ ಮಾತು. ಇವರು ದೇಶ ಸುತ್ತಲೂ ಇಲ್ಲ ಕೋಶ ಓದಲು ಇಲ್ಲ. ಆದರೆ ಬದುಕಿನ ಸತ್ಯಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೂ ಕೆಲವೊಂದು ಸತ್ಯಗಳು ಇವರು ಕಣ್ಣಿಗೆ ಕಂಡದ್ದನ್ನೇ ಸತ್ಯವೆಂದು ಸಣ್ಣ ಟಿವಿ ಒಳಗೆ ಬರುವುದನ್ನೇ ನಿಜವೆಂದು ನಂಬಿಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಹೊಸ ಕನಸುಗಳನ್ನು ಅವರ ಮನಸೊಳಗೆ ಬಿತ್ತಲಾಗುತ್ತಿಲ್ಲ. ಸಿಕ್ಕಿದರಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಅವರ ಬದುಕಿಗೆ ಅಷ್ಟೇ ಸಾಕು ಎನ್ನುವ ಯೋಚನೆಯು ಅವರದೇ. ಇಂತಹ ಆಲೋಚನೆ ನಮ್ಮ ಮನಸ್ಸೊಳಗೆ ಯಾಕೆ ಗಟ್ಟಿ ಆಗುತ್ತಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗದೇ ಅವರಂತಾಗಲು ದಿನವೂ ಪ್ರಯತ್ನ ಪಡ್ತಾ ಇದ್ದೇನೆ. ಸಾಧ್ಯವಾಗ್ತಾಯಿಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ