ಸ್ಟೇಟಸ್ ಕತೆಗಳು (ಭಾಗ ೭೮) - ಮಧ್ಯಮ ವರ್ಗ

ಸ್ಟೇಟಸ್ ಕತೆಗಳು (ಭಾಗ ೭೮) - ಮಧ್ಯಮ ವರ್ಗ

ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ? ಆ ದಿನ ನಾಟಕದ ತಯಾರಿಗೆ ಅಂತಿಮ ಹಂತದ ಸಿದ್ಧತೆ ನಡೆದಿತ್ತು. ಮನೆಯಿಂದ ದೂರದ ಊರಿನಲ್ಲಿ ಸಣ್ಣ ಕೋಣೆಯೊಂದರಲ್ಲಿ ಗೆಳೆಯರೊಂದಿಗೆ ಬದುಕುತ್ತಾ ಕಾಲೇಜಿಗೆ ಹೋಗುತ್ತಿದ್ದ. ಮನೆ ನೋಡುತ್ತಿದ್ದ ಅಣ್ಣ ಮನನೊಂದು ಸಾವಿನ ಬಾಗಿಲ ತೆರೆದು ಒಳಹೊಕ್ಕಿದ್ದ. ಕೃಷಿಯನ್ನೇ ನಂಬಿದ ಜೀವನವಾದ್ದರಿಂದ ಚಿತೆಯ ಬೆಂಕಿಯೊಂದಿಗೆ ಕನಸುಗಳನ್ನೆಲ್ಲ ಸುಟ್ಟು ಹಾಕಿ ಆತ ಗದ್ದೆಯ ಕಡೆಗೆ ಸಾಗಿದ. ಆಸೆಗಳು ಕತ್ತಲಿನ ಕನಸಲ್ಲಿ ಬಂದು ತಟ್ಟಿ ಎಬ್ಬಿಸಿ ಗರಿಗೆದರಿದರೂ, ಮುಂಜಾನೆ ಗದ್ದೆಗೆ ನೀರು, ದನಕ್ಕೆ ಮೇವು, ಬೆಳೆಗೆ ಗೊಬ್ಬರ ಎಲ್ಲವೂ ಅಗತ್ಯವಾದ್ದರಿಂದ ದುಡಿಮೆ ಅನಿವಾರ್ಯವಾಯಿತು. ಬದುಕಿದ್ದಾನೆ ಹೆಮ್ಮೆಯಿಂದ ಅಪ್ಪ-ಅಮ್ಮನ ಸಾಕುತ್ತಿರುವುದಕ್ಕೆ, ಒಂದಷ್ಟು ಕೃಷಿಯಲ್ಲಿ ಲಾಭ ಗಳಿಸಿದ್ದಕ್ಕೆ, ನಿರುದ್ಯೋಗಿ  ಗೆಳೆಯರ ಅನಗತ್ಯ ಸ್ಟೇಟಸ್ ಗಳಿಗಿಂತ ಭೂಮಿಯಲ್ಲಿ ಹರಿಸುತ್ತಿರುವ ಬೆವರ ಪ್ರತಿಫಲವಾಗಿ ಮನೆಯವರ ನೆಮ್ಮದಿ ನಿದ್ದೆಗೆ. "ಮುಂದಿನ ಬದುಕಿನ ಹೆಜ್ಜೆಯ ಅರಿವಿಲ್ಲದಿದ್ದರೂ ಸಾಗುವ ಛಲ ಬಿಡಬಾರದು" ಅಂದುಕೊಳ್ಳುತ್ತಾ ಸಾಗಿದ್ದಾನೆ ಗದ್ದೆಯ ನಡುವೆ…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ