ಸ್ಟೇಟಸ್ ಕತೆಗಳು (ಭಾಗ ೭೯೮) - ಭಗವಂತ
ದೇವರೇಕೆ ಅಷ್ಟೊಂದು ಆಚರಣೆಗಳನ್ನು ಬಯಸ್ತಾ ಇದ್ದಾನೆ. ಆತನಿಗೆ ವಾಲಗ ಡೋಲುಗಳು ಬೇಕು, ಹೂವಿನ ಅಲಂಕಾರಗಳು ಬೇಕು, ತೇರಿನ ಮೆರವಣಿಗೆ ಬೇಕು, ದೀಪಗಳ ಆರತಿ ಬೇಕು, ಜನ ಸೇರ್ಬೇಕು, ಹೊಟ್ಟೆ ತುಂಬಾ ತಿನ್ನಬೇಕು, ಎಲ್ಲ ಸಂಭ್ರಮಗಳನ್ನ ಅನುಭವಿಸಬೇಕು, ಬೆಳಕಿನ ಚಿತ್ತಾರ ಧ್ವನಿಯ ವರ್ಧಕ ಎಲ್ಲವೂ ದೇವರು ಇಷ್ಟ ಪಡುತ್ತಿದ್ದಾನೆ .ಆತನನ್ನ ಎಲ್ಲರೂ ಕೈಮುಗಿದು ದಿನವೂ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಎಲ್ಲರ ಬಳಿಗೂ ಆತನಿಗೆ ಹೋಗಿ ಆಶೀರ್ವಾದ ನೀಡಿ ಅವರ ಮನಸ್ಸಿನ ಇಚ್ಛೆಯನ್ನ ಈಡೇರಿಸುವುದಕ್ಕೆ ಸಮಯ ಸಾಕಾಗುವುದಿಲ್ಲವೇನೋ? ಹಾಗಾಗಿ ಭಗವಂತ ವರ್ಷಕ್ಕೊಂದು ಸಲ ಊರಿಗೆ ಬಂದು ತನ್ನನ್ನು ಸಂಭ್ರಮದಿಂದ ಉತ್ಸವ ಮಾಡುವಂತೆ ಜನರಲ್ಲಿ ಬೇಡಿಕೆ ಇಡುತ್ತಾನೆ. ಈ ಸಂಭ್ರಮದ ಉತ್ಸವದ ಸಮಯದಲ್ಲಿ ಹಲವು ಜನ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳುತ್ತಾರೆ. ಅದು ಆಚರಣೆಯೋ ಅನುಕರಣೆಯೋ ದಿನಚರಿಯೋ ಗೊತ್ತಿಲ್ಲ.ಭಗವಂತನ ಹೆಸರಿನಲ್ಲಿ ಬದುಕು ಕಟ್ಟಿಕೊಳ್ಳುವವರು ಹಲವರು. ಅದಕ್ಕಾಗಿ ಭಗವಂತ ಎಲ್ಲ ರೂಪಗಳನ್ನು ಸೃಷ್ಟಿಸಿದ್ದಾನೆ. ಹಾಗಾಗಿ ಪ್ರತಿಯೊಬ್ಬರೂ ಕೈಮುಗಿದು ಪ್ರಾರ್ಥಿಸುತ್ತಾರೆ ಮುಂದಿನ ವರ್ಷವೂ ಸಂಭ್ರಮದ ಜಾತ್ರೆಯಾಗಲಿ ಹೆಚ್ಚು ಜನ ನಮ್ಮೂರಿಗೆ ಬರಲಿ ಅಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ