ಸ್ಟೇಟಸ್ ಕತೆಗಳು (ಭಾಗ ೮೦೦) - ಡಂಗೂರ

ಸದ್ಯಕ್ಕೀಗ ತುರ್ತಾಗಿ ಬೇಕಾಗಿರೋದು ಡಂಗುರ ಸಾರಿಸುವವರು. ಡಂಗುರ ಸಾರದಿದ್ದರೆ ಶಬ್ದ ಕೇಳದಿದ್ದರೆ ಯಾರು ತಿರುಗಿ ನೋಡುವುದಿಲ್ಲ. ಹೊಸದೇನಾದರೂ ಶಬ್ದ ಬಂದರೆ ವಿನೋದಮಯವಾಗಿದ್ದರೆ ವಿಶೇಷವಾಗಿದ್ದರೆ ಕರ್ಕಶವಾಗಿದ್ದರೆ ಮಾತ್ರ ಅತ್ತ ಕಡೆಗೆ ಒಮ್ಮೆ ತಿರುಗಿ ನೋಡುತ್ತಾರೆ. ಆಸಕ್ತಿ ಇದ್ದರೆ ನಿಂತು ಕುಣಿಯುತ್ತಾರೆ ಇಲ್ಲವಾದರೆ ಸುಮ್ಮನೆ ಹೊರಡುತ್ತಾರೆ. ಹಾಗಾಗಿ ಶಬ್ದ ಮಾಡುತ್ತಿರಬೇಕು. ಒಂದಾದರೆ ಸ್ವತಃ ಶಬ್ದ ನುಡಿಸಬೇಕು ಅಥವಾ ನುಡಿಸುವವರನ್ನು ಜೊತೆಗಿಟ್ಟುಕೊಳ್ಳಬೇಕು. ಮೌನವಾಗಿ ಏನು ತೊಂದರೆ ಕೊಡದೆ ನಮ್ಮಷ್ಟಕ್ಕೆ ನಾವು ಶಬ್ದ ಮಾಡದೇ ಮುಂದುವರೆದರೆ ನಮ್ಮನ್ನ ಗಮನಿಸುವವರು ಯಾರು ಇಲ್ಲ . ಅದೆಲ್ಲ ಹೌದು... ಈ ಗಮನಿಸುವವರು ಯಾಕೆ?
ಸದ್ಯದ ಪರಿಸ್ಥಿತಿಯಲ್ಲಿ ನಾವು ಶಬ್ದ ಮಾಡಬೇಕು ನಮ್ಮ ಬದುಕಿನ ಇರುವಿಕೆಯನ್ನೇ ಮರೆತುಬಿಡುವ ಕಾಲದಲ್ಲಿದ್ದೇವೆ. ಹಾಗಾಗಿ ನಾವು ನುಡಿಸುವ ಶಬ್ದದ ಮೂಲಕ ಪ್ರತಿಯೊಂದು ಕೆಲಸವನ್ನು ಹೊರ ಜಗತ್ತಿಗೆ ತಿಳಿಸಲೇಬೇಕು. ಹಾಗಾದಾಗ ಅವಕಾಶಗಳು ಇನ್ನೊಂದು ಊರಲ್ಲೂ ಹೊಸ ಬಾಗಿಲನ್ನು ತೆರೆದುಕೊಳ್ಳಬಹುದು. ಹಾಗಾಗಿ ನನಗಂತೂ ಡಂಗುರ ಬಾರಿಸುವವರು ಸಿಕ್ತಾ ಇಲ್ಲ ನಿಮ್ಮಲ್ಲಿ ಏನಾದರೂ ಉಪಾಯವಿದ್ದರೆ ದಯವಿಟ್ಟು ತಿಳಿಸಿಕೊಡಿ. ನಿಮ್ಮಲ್ಲೇನಾದರೂ ಡಂಗುರ ಬಾರಿಸುವ ಯೋಚನೆ ಇಲ್ಲದಿದ್ದರೆ ಮೊದಲದನ್ನ ಆರಂಭ ಮಾಡಿ ಸದ್ಯಕ್ಕೆ ಡಂಗುರಕ್ಕೆ ಮಾತ್ರ ಬೆಲೆ ಇದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ