ಸ್ಟೇಟಸ್ ಕತೆಗಳು (ಭಾಗ ೮೦೨) - ಆಲೋಚನೆ

ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂಡಿದ್ದನ್ನು ಹಾಗೆ ಮಾಡೋಣ ಅಂತ ನಿರ್ಧಾರ ಮಾಡಿದರು. ಅದಕ್ಕಾಗಿ ರಾತ್ರಿ ಹಗಲಿನ ಪರಿಶ್ರಮವು ಸೇರಿಕೊಂಡಿತು. ಹಾಗೆ ಕೆಲಸಗಳು ಮುಂದುವರೆದು ಕೊನೆಗೆ ಕಾರ್ಯಕ್ರಮದ ಹಿಂದಿನ ದಿನ ಎಲ್ಲವನ್ನು ಸಿಂಗರಿಸುವ ಅಂತ ನಿರ್ಧಾರ ಮಾಡಿ ಸಿಂಗಾರವೂ ಶುರುವಾಯಿತು. ಹಾಗೆ ಶುರುವಾದ ಕೆಲಸ ಸಂಪೂರ್ಣಗೊಂಡಾಗ ಮೊದಲು ಕಂಡಿದ್ದ ಚಿತ್ರದಂತೆ ಕೆಲವೊಂದು ಕಡೆ ಕಂಡು ಬರಲೇ ಇಲ್ಲ ,ಇನ್ನೂ ಕೆಲವು ಕಡೆ ಕಂಡ ಚಿತ್ರಕ್ಕಿಂತ ಅದ್ಭುತವಾಗಿಯೂ ಆಗಿತ್ತು. ಹಾಗಾಗಿ ಕೆಲವೊಂದನ್ನ ಮತ್ತೆ ತೆಗೆದು ಹೊಸ ತರದ ಆಲೋಚನೆಗೆ ಮುನ್ನುಡಿ ಇಡಬೇಕಾಯಿತು. ಇಷ್ಟೆಲ್ಲ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವುದೇನಕೆ ಅಂತಂದ್ರೆ, ಯೋಚನೆಗಳು ಕಾರ್ಯರೂಪಕ್ಕೆ ಬಂದಾಗ ಮೊದಲಿನ ತರಹ ಇರೋದಿಲ್ಲ. ಕೆಲವೊಂದು ಸಲ ಕಾರ್ಯರೂಪಗಳೇ ಯೋಚನೆಗಿಂತಲೂ ಅದ್ಭುತವಾಗಿರುತ್ತದೆ. ಪ್ರತಿಯೊಂದು ಬದಲಾವಣೆಯನ್ನು ಸೇರಿಕೊಂಡು ಮುನ್ನುಗ್ಗಬೇಕು.ಇದು ಅರ್ಥ ಆಗೋದಕ್ಕೆ ನಮ್ಮ ಕಾಲೇಜಿನಲ್ಲಿ ದೊಡ್ಡದೊಂದು ಕಾರ್ಯಕ್ರಮ ಆಗಬೇಕಾಗಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ