ಸ್ಟೇಟಸ್ ಕತೆಗಳು (ಭಾಗ ೮೦೬)- ಸ್ಥಿತಿ

"ಅಕ್ಕ ಈ ಅಂಗಡಿಯಿಂದ ಏನಾದರೂ ತಗೋಳಕ್ಕ."
"ಪುಟ್ಟ ನನಗಿಲ್ಲಿ ಬೇಕಾಗಿರೋದು ಏನು ಇಲ್ಲ"
"ಅಕ್ಕ ನೀನು ಏನಾದ್ರೂ ತಗೊಂಡ್ರೆ ಅಮ್ಮ ಮತ್ತು ನಾನು ನಮಗೆ ಬೇಕಾಗಿರೋದನ್ನ ತಗೊಳ್ಬಹುದು, ಮನೆಯಲ್ಲಿ ತಮ್ಮ ಮಲ್ಕೊಂಡಿದ್ದಾನೆ ಅವನಿಗೆ ತಿನ್ನೋಕು ಸರಿಯಾಗಿ ಏನು ಸಿಕ್ಕಿಲ್ಲ ಇವತ್ತು ನಮ್ಮ ಮುಂದೆ ಇರುವ ವಸ್ತುಗಳಲ್ಲಿ ಒಂದಷ್ಟಾದರೂ ಖಾಲಿ ಆದರೆ ಮನೆಗೆ ಏನಾದರೂ ತೆಗೆದುಕೊಂಡು ಹೋಗಬಹುದು. ನಾವು ಏನಾದರೂ ತಿನ್ನಬಹುದು. ಅಕ್ಕ ಏನಾದರೂ ತಗೊಳ್ಳಿ"
ಹೀಗೆ ಆ ಹುಡುಗಿ ನನ್ನ ಒಬ್ಬಳ ಬಳಿಯಲ್ಲ ಬಂದ ಪ್ರತಿಯೊಬ್ಬರ ಬಳಿಯು ಇದೇ ಮಾತನ್ನು ಹೇಳ್ತಾ ಇದ್ದಳು. ಆದರೆ ಖರೀದಿಸುವ ಯೋಚನೆಯ ಮನಸ್ಸುಗಳು ಕೆಲವು ಮಾತ್ರ ಆ ಅಂಗಡಿಯ ಮುಂದೆ ಹಾದು ಹೋದವು. ಪ್ರತಿ ಒಬ್ಬರ ಮುಖದಲ್ಲೂ ಮಗುವಿಗೆ ಆ ದಿನದ ಅನ್ನ ಕಾಣುತ್ತಿತ್ತು .ಆದರೆ ದಾರಿಯಲ್ಲಿ ಹಾದು ಹೋಗುವ ಯಾವೊಬ್ಬನಿಗೂ ಆ ಮಗುವಿನ ನೋವು ಮನೆಯವರ ಹಸಿವು ಯಾವುದೂ ಕಾಣಲೇ ಇಲ್ಲ .ಮಗುವಿನ ಆಸೆಯ ಜಗತ್ತು ಕಣ್ಣ ಮುಂದೆ ಇದೆ. ತಾನು ಹಣ ಸಂಪಾದಿಸಬೇಕು ಅಮ್ಮನನ್ನ ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ತಮ್ಮನನ್ನ ಶಾಲೆಗೆ ಕಳುಹಿಸಬೇಕು, ಅಮ್ಮ ರಸ್ತೆ ಬದಿಯಲ್ಲಿ ನಿಂತು ಹೀಗೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಹೀಗೆ ಏನೇನೋ ಆಸೆಗಳನ್ನು ಹೊತ್ತುಕೊಂಡು ಆ ಮಗು ಕಾಯ್ತಾ ಇದೆ. ಬದಲಾಗುವ ದಿನಗಳು ಮುಂದೆ ಬರಬಹುದು ಅನ್ನುವ ಯೋಚನೆಯಲ್ಲಿ .ಕಾಲ ಮುಂದುವರಿತದೆ ಸಮಾಜವನ್ನು ನಂಬುವುದಕ್ಕೆ ಆಗುವುದಿಲ್ಲ ನೋಡಿ .ಮತ್ತೆ ಅದೇ ಮಗು ಅಮ್ಮ ಮಾರುತಿದ್ದ ವಸ್ತುಗಳಿಗೆ ಒಂದಷ್ಟು ಬಣ್ಣಗಳನ್ನ ತೇಪೆಗಳನ್ನ ಹಚ್ಚಿ ಮತ್ತೆ ಮಾರಾಟಕ್ಕೆ ಅದೇ ರಸ್ತೆ ಬದಿಯಲ್ಲಿ ಬಂದು ನಿಂತುಬಿಡುತ್ತೆ. ರಸ್ತೆ ಬದಲಾಗಿರುತ್ತೆ ಊರು ಬದಲಾಗಿರುತ್ತೆ ಜನರ ಸ್ಥಿತಿಗಳು ಬದಲಾಗಿರುತ್ತದೆ ಅವರ ಆ ಮನೆಯ ಪರಿಸ್ಥಿತಿ ಒಂದನ್ನ ಬಿಟ್ಟು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ