ಸ್ಟೇಟಸ್ ಕತೆಗಳು (ಭಾಗ ೮೧೭)- ಅರ್ಥ

ಸ್ಟೇಟಸ್ ಕತೆಗಳು (ಭಾಗ ೮೧೭)- ಅರ್ಥ

ಈ ಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ, ಅವರದೇ ರೀತಿಯಲ್ಲಿ ಯೋಚನೆಗಳನ್ನು ಕೂಡ ಮಾಡ್ತಾ ಇರ್ತಾರೆ. ಅವರಿಗೆ ಎಷ್ಟು ಸಲ ತಿದ್ದಿ ಹೇಳಿದರು ಕೂಡ ಅವರು ನಮ್ಮ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ನಮ್ಮ ಮೇಲೆ ದ್ವೇಷ ಸಾಧಿಸಲು ಆರಂಭಿಸುತ್ತಾರೆ. ನಾವು ಹೇಳುವ ಪ್ರತೀ ಮಾತುಗಳು ಅವರಿಗೆ ಕಿರಿಕಿರಿ ಅನಿಸುವುದಕ್ಕೆ ಆರಂಭ ಆಗುತ್ತೆ. ಆದರೆ ನಾವು ಜೀವನ ಅನುಭವದ ಮಾತುಗಳನ್ನ ಸುತ್ತಮುತ್ತಲು ಕಂಡ ವಿಚಾರಗಳನ್ನ ಮಕ್ಕಳಲ್ಲಿ ತುಂಬುತ್ತಿರುತ್ತವೆ. ಅವರು ಸರಿ ದಾರಿಯಲ್ಲಿ ನಡೆಯುವುದಕ್ಕೆ ಪ್ರೋತ್ಸಾಹ ಮಾಡುವುದಕ್ಕೆ ಇಷ್ಟೆಲ್ಲ ಮಾತುಗಳನ್ನಾಡಿ ಕೊನೆಗೆ ಮಕ್ಕಳಿಂದಲೇ ಕೆಟ್ಟವರನೆಸಿಕೊಳ್ಳುತ್ತೇವೆ. ಅಂತ ಜೋರು ಜೋರಾಗಿ. ಸರೋಜ ತನ್ನ ಪಕ್ಕದ ಮನೆಯರೊಂದಿಗೆ ತನ್ನ ಮಕ್ಕಳ ಬಗ್ಗೆ ದೂರು ಹೇಳುತ್ತಿದ್ದಳು. ಅಲ್ಲೇ ನಿಂತಿದ್ದ ಅನಿತಾ ವಿಚಾರವನ್ನ ಇನ್ನೊಂದು ರೀತಿಯಲ್ಲಿ ಅವರಿಗೆ ಅರ್ಥೈಸುವುದ್ದಕ್ಕೆ ಆರಂಭ ಮಾಡಿದರು. ಎಲ್ಲಾ ಸಮಯದಲ್ಲೂ ಮಕ್ಕಳದ್ದೇ ತಪ್ಪು ಅನ್ನುವ ವಾದವನ್ನ ನಾನು ಒಪ್ಪುವುದಿಲ್ಲ. ನಾವು ಹೆತ್ತವರು ಅವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ. ಎಷ್ಟು ಅವರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ, ಅವರಿಗೆ ಎಷ್ಟು ಸ್ವಾತಂತ್ರ್ಯ ನೀಡಿದ್ದೇವೆ, ಎಲ್ಲಿ ಕಟ್ಟಿ ಹಾಕಿದ್ದೇವೆ, ಅವರು ನಮ್ಮನ್ನ ವಿಪರೀತ ದ್ವೇಷಿಸೋಕೆ ಕಾರಣ ಏನು? ನಮ್ಮ ಪ್ರತೀ ಮಾತುಗಳಿಂದ ಅವರ ಮನಸ್ಸು ಎಷ್ಟು ಹಾನಿಗೊಂಡಿದೆ, ಎಷ್ಟು ಘಾಸಿಯಾಗಿದೆ ಇದನ್ನ  ಅರ್ಥ ಮಾಡಿಕೊಳ್ಳದೇ ನಾವೇ ಸರಿ ಅನ್ನುತ್ತಾ ವಾದ ಮಾಡಿದಾಗ ಮಕ್ಕಳು ನಮ್ಮಿಂದ ದೂರವಾಗ್ತಾ ಹೋಗ್ತಾರೆ. ಮನಸ್ಸು ಬಿಚ್ಚಿ ಮಾತಾಡಿ, ಅವರನ್ನೂ ಒಪ್ಪಿಕೊಳ್ಳಿ ಆಗ ನಿಮ್ಮನ್ನು ಅವರು ಅಪ್ಪಿಕೊಳ್ಳ್ತಾರೆ.... ಸರೋಜ ಹಾಗೇ ಮೌನವಾದರು. ದೂರದಲ್ಲಿ ನಿಂತ ಮಗ ಅಮ್ಮ ಇದನ್ನ ಅರ್ಥ ಮಾಡಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಂಡ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ