ಸ್ಟೇಟಸ್ ಕತೆಗಳು (ಭಾಗ ೮೧೯)- ಜಾಗವೊಂದು

ಸ್ಟೇಟಸ್ ಕತೆಗಳು (ಭಾಗ ೮೧೯)- ಜಾಗವೊಂದು

ಕಟ್ಟಡ ಒಂದು ನೆಲದಿಂದ ಮೇಲೆದ್ದು ನಿಲ್ಲಬೇಕಾಗಿತ್ತು. ತಲೆಯ ಮೇಲೊಂದು ಸೂರು ಬೇಕಿತ್ತು. ಸೂರಿನ ಒಳಗೆ ಆಶ್ರಯ ಪಡೆದು ಜೀವನವ ಸಾಗಿಸುವುದಕ್ಕಲ್ಲ. ಆ ಸೂರಿನ ಕೆಳಗೆ ಆಗಾಗ ಸೇರಿಕೊಂಡು ಸಮಾಜಕ್ಕೊಂದು ಹೊಸ ರೀತಿಯ ಶಕ್ತಿ ತುಂಬುವ ಕೆಲಸ ಮಾಡುವ ಸಮಯಕ್ಕಾಗಿ ಅಲ್ಲಿ ಸೇರುವುದಕ್ಕೊಂದು ಸ್ಥಳ ಬೇಕಾಗಿತ್ತು. ದೊಡ್ಡ ಮನಸ್ಸಿನ ಹಿರಿಯರೊಬ್ಬರ ಉದಾರವಾದ ದೇಣಿಗೆಯಾಗಿ ಬಂದ ನೆಲದಲ್ಲಿ ನಾಲ್ಕು ಗೋಡೆಗಳನ್ನ ಒಪ್ಪಿ ಗಟ್ಟಿಯಾಗಿ ನಿಂತ ಸಣ್ಣ ಕಟ್ಟಡವೊಂದು ಎದ್ದು ನಿಂತಿತು. ಅಲ್ಲಿದ್ದ ಊರಿನ ಕಥೆಗೆ ಹೊಸತೊಂದು ಅಧ್ಯಾಯವು ಬರೆಯಲ್ಪಟ್ಟಿತು. ಊರಿನ ಸಮಸ್ಯೆಗೆ ಪರಿಹಾರ ಅಲ್ಲಿಂದ ಹುಟ್ಟುತ್ತದೆ. ನೋವಿಗೆ ಮೊದಲೇ ಔಷಧಿ ತಯಾರಾಗುತ್ತದೆ. ಬದಲಾವಣೆಗೆ ಹೊಸತೊಂದು ನಾಂದಿ ಇಲ್ಲಿಂದಲೇ ಉಗಮವಾಗುತ್ತದೆ. ಆಲೋಚನೆಗಳು ತುಂಬ ಗಟ್ಟಿಯಾಗಿದ್ದ ಕಾರಣ ಇನ್ನೂ ಕೂಡ ಆ ಗೋಡೆಗಳು ಗಟ್ಟಿಯಾಗಿ ನಿಂತು ಹೆಜ್ಜೆ ಇಡುವ ಕಾಲುಗಳು ಅಲ್ಲೇ ಗಟ್ಟಿಯೂರಿ ನಿಲ್ಲುತ್ತಿದ್ದಾವೆ. ಅಲ್ಲಿ ಆಗಾಗ ಸೇರ್ತಾರೆ, ಮನಸ್ಸಿನ ಎಲ್ಲ ದುಃಖಗಳನ್ನು ಮರೆತು ಒಬ್ಬರಿಗೊಬ್ಬರು ಆದರದಿಂದ ಪ್ರೀತಿಯಿಂದ ಬರಮಾಡಿಕೊಳ್ಳುವುದಕ್ಕೆ. ಹಾಗಾಗಿ ಮನಸ್ಸಿನೊಳಗಡೆ ಅಸೂಯೆ, ದ್ವೇಷ, ಅಹಂಕಾರದ ಯಾವುದೇ ರೋಗವಿಲ್ಲದೆ ಪ್ರೀತಿ ಒಂದನ್ನೇ ತುಂಬಿಕೊಂಡು ಒಳಿತನ್ನೇ ಹೊಸ ಸೂಸುವ ಮಾತುಗಳನ್ನಾಡುತ್ತಾರೆ. ಮಾದರಿಯಾಗಿದ್ದಾರೆ ಸುತ್ತಲಿನವರು ನೋಡಿ ಕಲಿಯುವಂತೆ ಮಾಡಿ ತಿಳಿಯುವಂತೆ ಮಾದರಿಯಾಗಿದ್ದಾರೆ. ಮನೆ ಮನೆಯ ಹಬ್ಬಗಳೆಲ್ಲವೂ ಜೊತೆಯಾಗಿ ಅಲ್ಲಿ ಸಂಘಟನೆಗಳಾಗುತ್ತವೆ. ಸಿಹಿಗಳು ಹಂಚಿಕೆಯಾಗುತ್ತವೆ. ಎಲ್ಲ ಕುಟುಂಬಗಳು ಜೊತೆಯಾಗಿ ಬದುಕುತ್ತಿದ್ದಾವೆ. ಸಾಗುತ್ತಿರುವ ಊರುಗಳೆಲ್ಲ ಒಮ್ಮೆ ಈ ಸ್ಥಳದಿಂದ ಹಾದು ಹೋಗಿ ಇರುವ ಕುಟುಂಬಗಳನ್ನ ಮಾತನಾಡಿಸಿ ನೋಡಬೇಕು. ನಮ್ಮ ಊರುಗಳಿಗೂ ಅಂತಹ ಗಟ್ಟಿ ತಂಡದ ಅವಶ್ಯಕತೆ ಏನು ಅನ್ನೋದು ಖಂಡಿತವಾಗಿಯೂ ಅರಿವಾಗುತ್ತದೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ