ಸ್ಟೇಟಸ್ ಕತೆಗಳು (ಭಾಗ ೮೨೦)- ಖಾಲಿ

ನನ್ನ ಬಳಿ ಇರೋದು ಖಾಲಿಯಾದ ಒಂದು ಬಾಟಲ್. ಅದರೊಳಗೆ ಏನು ತುಂಬಿಸಬೇಕು ಅನ್ನೋದನ್ನ ನಾನು ತೀರ್ಮಾನ ಮಾಡಬೇಕಿತ್ತು, ಅದಲ್ಲದೆ ಅದರೊಳಗೆ ಯಾವುದನ್ನು ಎಷ್ಟು ಪ್ರಮಾಣದಲ್ಲಾದರೂ ತುಂಬಿಸಬಹುದು. ನಾನು ಸಿಕ್ಕಿದ್ದನ್ನೆಲ್ಲಾ ತುಂಬಿಸಿಕೊಂಡು ಅದು ಯಾವುದಕ್ಕೂ ಉಪಯೋಗ ಆಗದೆ ಇರೋ ಹಾಗೆ ಮಾಡಿಕೊಂಡುಬಿಟ್ಟೆ. ಇದ್ದದನ್ನೆಲ್ಲ ಚೆಲ್ಲೋಣ ಅಂತಂದ್ರು, ಮೊದಲು ತುಂಬಿಸಿಟ್ಟಂತಹ ಕೊಳಕು ನೀರುಗಳೆಲ್ಲ ತಮ್ಮ ವಾಸನೆಯನ್ನು ಬಿಡುವುದಕ್ಕೆ ಆರಂಭ ಮಾಡಿದವು. ಅದರಿಂದ ಶುದ್ಧವಾಗಿರೋದು ಹಾಳಾಗೋದಕ್ಕೆ ಶುರುವಾಯಿತು. ಪರಿಸ್ಥಿತಿ ಸರಿ ಇರುವವರೆಗೂ ಇದು ಯಾವುದು ಅರ್ಥಾನೇ ಆಗ್ಲಿಲ್ಲ. ಹಾಗಾಗಿ ಈಗ ತುಂಬಿಸಿಕೊಳ್ಳುವಾಗ ತುಂಬಾ ಜಾಗ್ರತೆ ಮಾಡ್ತಿದ್ದೇನೆ. ಯಾಕೆಂದರೆ ಅದು ನನ್ನ ಬಾಟಲ್ ಹೊಡೆದು ಹೋದರೆ ಅದರ ಪೂರ್ತಿ ಜವಾಬ್ದಾರಿ ನನ್ನದೆ. ಮತ್ತೆ ಇನ್ನೊಂದು ಬಾಟಲನ್ನು ಖರೀದಿಸಲು ಆಗುವುದಿಲ್ಲ ಹಾಗಾಗಿ ಕೆಟ್ಟದ್ದಕ್ಕಿಂತ ಒಳ್ಳೆಯ ವಸ್ತುಗಳನ್ನು ಅದರೊಳಗೆ ತುಂಬಿಸುತ್ತಾ ಹೋದರೆ ಕೆಟ್ಟದ್ದು ಕಡಿಮೆಯಾಗಿ ಒಳ್ಳೆಯದು ಹೆಚ್ಚಾಗಿ ಆ ಬಾಟಲಿನ ಬಾಳ್ವಿಕೆ ಹೆಚ್ಚು ಬರುತ್ತದೆ. ನಿಮ್ಮ ಬಳಿ ವಿವಿಧ ಗಾತ್ರದ ಇತರಹದ ಬಾಟಲಿಗಳಿರಬಹುದು ದಯವಿಟ್ಟು ತುಂಬಿಸುವಾಗ ಮುತುವರ್ಜಿಯಿಂದ ಅಗತ್ಯವಾದುದ್ದನ್ನ ತುಂಬಿಸಿಕೊಳ್ಳಿ. ಮತ್ತೊಮ್ಮೆ ಅದನ್ನು ಖಾಲಿ ಮಾಡಿ ಶುದ್ಧಗೊಳಿಸಿ ಬದಲಾಯಿಸುತ್ತೇನೆ ಅನ್ನುವಂತ ಸ್ಥಿತಿ ಸಾಧ್ಯವಾಗದೇ ಇರಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ