ಸ್ಟೇಟಸ್ ಕತೆಗಳು (ಭಾಗ ೮೨೯)- ಆಸ್ಪತ್ರೆ
ಉಳಿಸಬೇಕೆನ್ನುವ ದಾವಂತ ಯಾರಿಗೂ ಇಲ್ಲ. ಹಾಗೆಯೇ ಮನೆಯಲ್ಲಿ ಮಲಗಿ ನರಳುವುದಕ್ಕಿಂತ ಅದನ್ನ ನೋಡಿ ವ್ಯಥೆಪಡುವುದಕ್ಕಿಂತ ಆಸ್ಪತ್ರೆಯ ಒಳಗೆ ಮಲಗಿ ನೋಡಿಕೊಳ್ಳುವವರು ಇದ್ದಾರೋ ಇಲ್ಲವೋ ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳದೆ ಹಾಗೆಯೇ ಬಿಟ್ಟುಬಿಡಬಹುದು. ಕ್ಷಣ ಕ್ಷಣಕ್ಕೆ ಅವರಿಗೆ ಬೇಕಾದನ್ನು ನೀಡುವುದಕ್ಕೆ ವೈದ್ಯರು ಇರುತ್ತಾರೆ, ಬದುಕಿಯೂ ಸತ್ತಂತಿರುವ ಆ ಜೀವವನ್ನು ಬದುಕಿಸಬೇಕು ಅನ್ನುವ ಸಣ್ಣ ಯೋಚನೆಯೂ ಇಲ್ಲದೆ ಸಂಬಂಧ ಇಲ್ಲದವರನ್ನು ಪಕ್ಕದಲ್ಲಿ ಬಂದು ಕುಳ್ಳಿರಿಸಿದ್ದಾರೆ. ಜೀವ ಉಸಿರನ್ನು ಮೇಲೆ ಕೆಳಗೆ ಕಳುಹಿಸುವುದಕ್ಕೂ ಕಷ್ಟ ಪಡ್ತಾ ಇದೆ. ಆರೈಕೆ ಇಲ್ಲ ಅಕ್ಕರೆ ಇಲ್ಲ ಪ್ರೀತಿ ಇಲ್ಲ ಆದರೆ ಇವೆಲ್ಲವನ್ನೂ ತನ್ನ ಮಕ್ಕಳಿಗೆ ನೀಡಿತ್ತು. ಮಕ್ಕಳಿಗೆ ಈಗ ಬೇಡವಾಗಿತ್ತು. ತಾವು ದುಡಿಯುವ ವೇಗದಲ್ಲಿ ಎಲ್ಲಿ ಹಣ ಖರ್ಚಾಗಿ ಬಿಡುತ್ತೋ ತಮ್ಮ ಬದುಕಿಗೆ ತೊಂದರೆ ಆಗುತ್ತದೆ ಅನ್ನೋ ಕಾರಣಕ್ಕ ದಿನದಲ್ಲೊಂದು ಸಲ ಕಣ್ಣಾಡಿಸಿ ಹೊರಟು ಹೋಗುತ್ತಿದ್ದಾರೆ. ದಿನಗಳು ವಾರಗಳಾಗಿ ತಿಂಗಳುಗಳಾದರು ದೇಹ ಸುಧಾರಿಸುತ್ತಿಲ್ಲ. ಹಿರಿಯ ಜೀವಕ್ಕೆ ಪ್ರೀತಿ ನೀಡಿದರೆ ಇನ್ನೊಂದಷ್ಟು ಗಟ್ಟಿ ಚೇತನವಾಗಬಹುದೇನೋ? ಕೊಂಡೊಯ್ಯುವ ಕಾಲೋನಿಗೂ ಇನ್ನೊಂದಷ್ಟು ಕಾಲ ಕಾಯಿಸುವ ಯೋಚನೆ ಬಂದದ್ದಾದರೂ ಏಕೆ? ಎನ್ನುವುದು ಗೊತ್ತಾಗ್ತಾ ಇಲ್ಲ .ಆಸ್ಪತ್ರೆ ಬದುಕಿನ ದುರಂತ ಕ್ಷಣಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ