ಸ್ಟೇಟಸ್ ಕತೆಗಳು (ಭಾಗ ೮೩೯)- ಕಾಣೋದು

ಸ್ಟೇಟಸ್ ಕತೆಗಳು (ಭಾಗ ೮೩೯)- ಕಾಣೋದು

ಆ ಸಂಭ್ರಮದಿಂದ ಮನ ತುಂಬಿಕೊಳ್ಳುವವರು, ಮನೆ ತುಂಬಿಕೊಳ್ಳುವವರು, ಹೊಟ್ಟೆ ತುಂಬಿಕೊಳ್ಳುವವರು ಎಲ್ಲರೂ ಅಲ್ಲೇ ಓಡಾಡುತ್ತಿದ್ದಾರೆ. ಆ ರಸ್ತೆಯ ಕೊನೆಯಲ್ಲಿ ಒಂದು ಸಣ್ಣ ಅಂಗಡಿಯಿಟ್ಟು ಆತ ಕಾಯುತ್ತಿದ್ದಾನೆ. ಬಣ್ಣ ಬಣ್ಣದ ಮುಖವಾಡಗಳನ್ನ ಮಾರಾಟ ಮಾಡುತ್ತಾ ಆತನೂ ಮುಖವಾಡವನ್ನು ಧರಿಸಿದ್ದಾನೆ. ಜಾತ್ರೆ ಆರಂಭವಾಯಿತು ವಿವಿಧ ರೀತಿಯ ವೇಷಗಳನ್ನು ಹೊತ್ತು ಮೆರವಣಿಗೆಗಳು ಸಾಗುತ್ತಿದ್ದಾವೆ. ಆ ವೇಷವನ್ನ ಹೊತ್ತವನ ಬದುಕು ಅಷ್ಟು ಸಂಭ್ರಮದಿಂದ ಕೂಡಿಲ್ಲ. ವಿಜೃಂಭಣೆಯನ್ನ ಬಯಸಿಲ್ಲ. ಸಿಗುವ ನಾಲ್ಕು ಕಾಸು ದಿನದ ಬದುಕಿಗಾಗುತ್ತದೆ.ಒಳಗೆ ಕುಳಿತವನಿಗೆ ಬೆವರು ದೇಹದಿಂದ ಇಳಿದು ನೆಲವನ್ನ ಮುಟ್ಟುತ್ತಿದೆ. ಜನರ ಸಂಭ್ರಮದ ಮುಖವನ್ನು ಗಮನಿಸುತ್ತಾ ತನಗೆ ಯಾವಾಗ ಬರುವುದು ಆ ದಿನ ಎಂದು ಕಾಯುತ್ತಿದ್ದಾನೆ. ಪ್ರತಿ ಊರಿನಲ್ಲಿ ವಿಶೇಷ ಸಂಭ್ರಮಗಳಾದಾಗ ಇವನನ್ನು ಕರೆಯುತ್ತಾರೆ ಸಂಭ್ರಮದಿಂದಲೇ ಅತ್ತ ಕಡೆಗೆ ಹೋಗುತ್ತಾನೆ. ಮನೆಯ ಬದುಕು ಬದಲಾವಣೆಯಾಗುತ್ತೆ ಅನ್ನುವ ನಂಬಿಕೆಯಲ್ಲಿ. ಒಂದು ದಿನವೂ ಆತ ಉತ್ಸವ ಹೇಗಿರುತ್ತೆ ಅನ್ನೋದನ್ನ ಗಮನಿಸಿ ಇಲ್ಲ. ಕಿಂಡಿ ಒಳಗಿಂದ ಕಾಣುವ ಪುಟ್ಟ ಜಗತ್ತೇ ಅದ್ಭುತ ಅಂದುಕೊಂಡಿದ್ದಾನೆ.ಹೆಚ್ಚು ಕುಣಿದಷ್ಟು ಹೆಚ್ಚು ದುಡ್ಡು ಸಿಗುತ್ತದೆ ಅನ್ನುವ ಕಾರಣಕ್ಕೆ ದೇಹ ದಣಿದರೂ ದೇಹ ಮಾತು ಕೇಳದಿದ್ದರೂ ಕೂಡ ದಂಡಿಸುತ್ತಾನೆ. ರಂಜಿಸುತ್ತಾನೆ ನೋಡುಗರಿಗೆ ಗೊಂಬೆ ಹೇಗೆ ಚಂದವೋ ಅದರೊಳಗಿನ ಮನುಷ್ಯನ ಯಾತನೆ ಅವನಿಗೇ ಗೊತ್ತು.ಹಾಗೆಯೇ ಬದುಕು ಕೂಡ ಕಣ್ಣಿಗೆ ಕಂಡತೆ ಸುಂದರತೆಯಲ್ಲ.  ಒಳಗಿನ ಯಾತನೆಯನ್ನ ಅನುಭವಿಸಿದವನಿಗೆ ಮಾತ್ರ ಅದರ ತೀಕ್ಷ್ಣತೆ  ಅರಿವಾಗುತ್ತೆ.ಅವನು ಇನ್ನೊಂದು ಊರಿನ ಜಾತ್ರೆಗೆ ಕಾಯುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ