ಸ್ಟೇಟಸ್ ಕತೆಗಳು (ಭಾಗ ೮೪೪)- ಗೆಳೆಯಾ

ಸ್ಟೇಟಸ್ ಕತೆಗಳು (ಭಾಗ ೮೪೪)- ಗೆಳೆಯಾ

ಕಾಲ ಅಂದ್ರೆ ನೇ ಹೀಗೆನೋ ಏನೋ?, ಯಾವಾಗ ಇಷ್ಟು ಬೇಗ ಮುಂದುವರೆದು ಬಿಟ್ಟೆವು ಗೊತ್ತಾಗಲೇ ಇಲ್ಲ? ನಾನು ಏನೋ ಓದ್ತಾ ಇದ್ದೆ, ಅವನು ಏನೋ ಓದ್ತಾ ಇದ್ದ. ಆದರೆ ನಮ್ಮಿಬ್ಬರ ಮನಸ್ಸು ಮಾತ್ರ ಒಂದೇ ರೀತಿ ಆಲೋಚನೆಗಳಾಗಿದ್ದರಿಂದ ಆಗಾಗ ಜೊತೆ ಸೇರ್ತಾ ಇದ್ವಿ. ಹೆಚ್ಚಿನ ಕೆಲಸಗಳಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಡುತ್ತಿದ್ವಿ. ಒಬ್ಬರನ್ನೊಬ್ಬರು ಅರ್ಥನು ಮಾಡಿಕೊಂಡಿದ್ವಿ .ಕೆಲಸಗಳು ಹೆಚ್ಚಾಗುತ್ತಾ ಹೋಯಿತು, ಇಬ್ಬರ ದಾರಿಗಳು ದೂರವಾಗುತ್ತಾ ಹೋಯಿತು. ಅವನೆಲ್ಲೋ ಒಂದು ಕಡೆ ನಾನೆಲ್ಲೋ ಒಂದು ಕಡೆ ಆಗಾಗ ಫೋನು ನಮ್ಮಿಬ್ಬರನ್ನು ಹತ್ತಿರ ಮಾಡಿಸಿತು. ಯಾವುದೋ ಒಂದು ಕಾರ್ಯಕ್ರಮದಲ್ಲಿ ಮತ್ತೆ ಭೇಟಿಯಾಗುವ ಅವಕಾಶವೂ ಸಿಕ್ಕಿತು ಆದರೆ ಜವಾಬ್ದಾರಿ ಅನ್ನುವಂತಹ ದೊಡ್ಡದೊಂದು ಹೊರೆ ಹೆಗಲ ಮೇಲೆ ಗಟ್ಟಿಯಾಗಿ ಕೂತಾಗ ಅವನ ದಿಕ್ಕೇ ಬೇರೆ ನನ್ನ ದಿಕ್ಕೆ ಬೇರೆಯಾಯಿತು. ಇಬ್ಬರಿಗೂ ಮನಸ್ಸಲ್ಲಿ ತುಂಬಾ ಯೋಚನೆಗಳಿದೆ, ಮನಸ್ಸು ಬಿಚ್ಚಿ ಮಾತನಾಡಬೇಕು ಅಂತಿದೆ, ತುಂಬಾ ವಿಚಾರಗಳನ್ನ ಹೇಳಿಕೊಳ್ಳಬೇಕು ಅಂತಿದೆ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಅಂತಾನೂ ಇದೆ.ಆದರೆ ಸಮಯ ಹೊಂದಾಣಿಕೆ ಮಾಡಿಕೊಳ್ಳೋಕ್ಕೆ ಆಗುತ್ತಿಲ್ಲ.  ಹಾಗಾಗಿ ಬಾಂಧವ್ಯ ದೂರದಲ್ಲಿದೆ.ಆದರೆ ಭಾವನೆ ಹಾಗೆ ಇದೆ ಈಗಲೂ ಕೂಡ ಆತ ನನ್ನ ಮನಸ್ಸಿನ ಒಳಗೆ ಅದೇ ಸ್ಥಾನವನ್ನು ತುಂಬಿಕೊಂಡಿದ್ದಾನೆ. ಗೆಳೆತನ ನನ್ನೊಳಗೆ ಈಗಲೂ ಜಾಗೃತನಾಗಿದೆ. ತುಂಬಾ ಮಿಸ್ ಮಾಡ್ಕೊತಾ ಇದೀನಿ ಆದಷ್ಟು ಬೇಗ ಸಿಗೋಣ ಮಾರಾಯ.

ಪತ್ರ ಬರೆದಿಟ್ಟು ಡೈರಿ ಮುಚ್ಚಿದ. ತನ್ನೆಲ್ಲ ನೆನಪುಗಳನ್ನ ಮನಸ್ಸಿನೊಳಗೆ ತುಂಬಿಕೊಂಡು ಕಣ್ಣಂಚಲ್ಲಿ ಸಣ್ಣ ಹನಿಗಳನ್ನು ಜಾರಿಸುತ್ತಿದ್ದ. ಜವಾಬ್ದಾರಿ ವಿಪರೀತವಾಗಿ ಬಾಂಧವ್ಯಗಳು ದೂರ ಆಗುತ್ತಿದ್ದಾವೋ ಎನ್ನುವ ಭಯ ಆತನನ್ನ ಕಾಡೋದಕ್ಕೆ ಆರಂಭವಾಯಿತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ