ಸ್ಟೇಟಸ್ ಕತೆಗಳು (ಭಾಗ ೮೪) - ಕುರ್ಚಿ

ಸ್ಟೇಟಸ್ ಕತೆಗಳು (ಭಾಗ ೮೪) - ಕುರ್ಚಿ

ಜಗಳ ಜೋರಾಗಿತ್ತು. ಅದೊಂದು ಆಟ. ಆದರಲ್ಲಿ ಸಿಟ್ಟು ಹೊಡೆತಗಳು ಮಾಮೂಲಿ. ಅಜ್ಜನ ಮನೆಯಲ್ಲಿ ವಿಶೇಷವಾದ ದಿನದಂದು ಒಟ್ಟು ಸೇರೋದು ವಾಡಿಕೆ. ದೊಡ್ಡವರೊಂದಿಗೆ ನಮಗೇನು ಕೆಲಸವಿಲ್ಲ. ಮನೆಗಳ ಸಮಸ್ಯೆಗಳು, ಬೆಳೆಗಳ ಫಸಲು, ಮದುವೆಯ ಮಾತುಕತೆ, ಇದ್ಯಾವುದು ನಮ್ಮ ಪರಿಧಿಯೊಳಗೆ ಬರುವುದಿಲ್ಲ. ನಮ್ಮ ಬಳಗ ಜೊತೆಯಾದರೆ ಆಟ ಆರಂಭವಾಗುತ್ತೆ .ನಮ್ಮ ಪಂಗಡದಲ್ಲಿ 12 ಜನ. ದೊಡ್ಡವನಾಗದ ನಾನು ಏಳನೇ ತರಗತಿ. ಕೊನೆಯ ಕೊಂಡಿಗೆ 4 ವರ್ಷ. ಇಲ್ಲಿ ತುಂಡುತುಂಡು ಜೀವಗಳು ಗುಂಪಾಗುತ್ತದೆ. ನಮ್ಮೆಲ್ಲರ ಪ್ರೀತಿಯ ಆಟ ಕುರ್ಚಿ ಆಟ. ಮನೆಯಲ್ಲಿ ಅಜ್ಜನ ಹಳೇ ಒರಗುವ  ಕುರ್ಚಿ. ಯಾರೂ ಕೂರುತ್ತಾರೆ ಅನ್ನೋದು ಗೆಲುವನ್ನ ನಿರ್ಣಯಿಸುತ್ತೆ. ಹೆಚ್ಚಾಗಿ ನನ್ನದೇ ಅಂಡು ಕೂರುತ್ತಿದ್ದರು ಉಳಿದವರೆಲ್ಲರೂ ಶ್ರಮದಿಂದ ನನ್ನ ಎಳೆದು ಹಾಕಿದ್ರು. ಮುಂದೆ ಅವರೊಳಗೆ ಕಿತ್ತಾಟ ಆರಂಭವಾಯಿತು. ಹೀಗೆ ಜಗಳಗಳು ಹೆಚ್ಚಾಯಿತು. ಎಳೆದಾಡುವುದು, ಕೈಗೆ ಗಾಯವಾಯಿತು, ಕಿರುಚಾಡಿದೆವು, ಇನ್ನೊಬ್ಬನ ಮೇಲೆ ದೂರಿದೆವು, ಸೋಲೋಕೆ ಯಾರೂ ತಯಾರಿಲ್ಲ. ಇಲ್ಲಿ ಹೆಣ್ಣು-ಗಂಡು ದೊಡ್ಡವ ಸಣ್ಣವ ಭೇದವಿಲ್ಲ. ಕುರ್ಚಿ ನನ್ನದಾಗಬೇಕು ಅನ್ನೋದೆ ಒಂದು ಗುರಿ. ಅದರಿಂದ ಏನು ಸಿಗುತ್ತೆ ಅನ್ನೋದು ಗೊತ್ತಿಲ್ಲ. ಮನೆ ಒಳಗಿಂದ ಅಜ್ಜಿ " ಊಟಕ್ಕೆ ಬನ್ರೋ, ಪಾಯಸ ತಯಾರಾಗಿದೆ. ಎಲ್ರೂ ಎಲೆ ಮುಂದೆ ಕೂತಿದ್ವಿ. ಕುರ್ಚಿ ಅನಾಥವಾಗಿತ್ತು. ಆಗ ಟಿವಿಯಲ್ಲಿ ಯಾರೋ ದೊಡ್ಡವರು ನಮ್ಮದೇ ಆಟ ಆಡುತ್ತಿದ್ದರು. ಆದರೆ ನಾವು ಆಟವಾಡುವಾಗ ಒಂದು ದಿನವೂ ಟಿವಿಯಲ್ಲಿ ತೋರಿಸಿಲ್ಲ. ಇದು ಮೋಸ ಅಲ್ವಾ?. ನಾವು ಊಟಕ್ಕೆ  ಕರೆದಾಗ ಕುರ್ಚಿ ಬಿಟ್ಟು ಬಂದ್ವಿ, ಅವರೇನು ಮಾಡಿದರು? ಯಾವಾಗ್ ಹೋದರು? ಗೊತ್ತಿಲ್ಲ. ಕುರ್ಚಿಗೆ ಎಂತ ಮರ್ಯಾದೆ ಅಲ್ವಾ?

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ