ಸ್ಟೇಟಸ್ ಕತೆಗಳು (ಭಾಗ ೮೬೯)- ಆಕೆಯ ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೮೬೯)- ಆಕೆಯ ಪ್ರಶ್ನೆ

ಯಾವಾಗ ಇದೆಲ್ಲ ಬದಲಾಗುತ್ತೆ ? ನಾನು ಮನೆಯಲ್ಲಿ ಕೇಳಿದ ತಕ್ಷಣ ಸರಿ ಮಗ ಹೋಗ್ಬಿಟ್ಟು ಬಾ, ಒಳ್ಳೆದಾಗಲಿ ಅಂತ ಹೇಳುವ ದಿನಗಳು ಯಾವಾಗ ಬರುತ್ತೆ? ಯಾವುದೋ ಒಂದು ಊರಿಗೆ ಪ್ರವಾಸ ಹೋಗಬೇಕು ನಾನೊಬ್ಬಳೇ ಹೋಗಿ ಇಡೀ ಊರು ಸುತ್ತು ಹೊಡೆದುಕೊಂಡು ಬರಬೇಕು ಅನ್ನುವ ಧೈರ್ಯ ನನ್ನೊಳಗೆ ಯಾವಾಗ ಬರುತ್ತೆ? ನಾನು ತುಂಬಾ ಧೈರ್ಯದಿಂದ ಕೆಲಸ ಮಾಡಿ ಮನೆ ಸಾಗ್ತಾ ಇದ್ದೇನೆ. ನನ್ನಿಷ್ಟದಂತೆ ಎಲ್ಲವೂ ನಡೆಯುತ್ತೆ ಅಂತ ಹೇಳುವ ದಿನಗಳು ಯಾವಾಗ ಬರುತ್ತೆ ? ನನಗೆ ಇಷ್ಟವಾಗಿದ್ದಾರೆ, ಇವರ ಜೊತೆಗೆ ನಾನು ಬದುಕನ್ನ ಸಾಗಿಸಬಹುದು ಅಂತ ಅಂದುಕೊಂಡಿದ್ದೇನೆ ಅಂತ ಹೇಳುವ ಧೈರ್ಯದ ದಿನಗಳು ಯಾವಾಗ ಬರುತ್ತೆ? ಸ್ವಂತ ಗಾಡಿ ಹಿಡಿದುಕೊಂಡು ಎಷ್ಟು ದೂರವಾದರೂ ಹೋಗಿ ಒಂದೆರಡು ದಿನ ಕಳೆದು ಮತ್ತೆ ಮನೆಗೆ ಮರಳಿ ಬರುವಂತಹ ಧೈರ್ಯ ಮತ್ತು ಮನೆಯವರಿಗೆ ನನ್ನ ಮೇಲೆ ಧೈರ್ಯ ಯಾವಾಗ ಬರುತ್ತೆ? ಈ ಸಮಾಜದಲ್ಲಿ ನೀನು ಹೇಗೆ ಬೇಕಿದ್ದರೂ ಬದುಕಬಹುದು ಮಗ ಏನೋ ತೊಂದರೆ ಇಲ್ಲ ಅನ್ನುವ ಸಮಾಜ ಯಾವಾಗ ನಿರ್ಮಾಣವಾಗುತ್ತೆ? ನಾನು ಹುಡುಗಿ ಅನ್ನುವ ಕಾರಣಕ್ಕೆ ಹಲವು ಅವಕಾಶಗಳನ್ನ ಬಿಡದೆ ಎಲ್ಲವನ್ನ ಪಡೆದುಕೊಂಡು ಎಲ್ಲರಿಗಿಂತ ಎತ್ತರ ಸ್ಥಾನದಲ್ಲಿ ನಿಲ್ಲುವಂತಹ ಧೈರ್ಯ ನನಗೆ ಯಾವಾಗ ಬರುತ್ತೆ? ಪ್ರತಿಯೊಂದಕ್ಕೂ ಒಬ್ಬರನ್ನ ಆಶ್ರಯಿಸದೆ ಬದುಕುವ ಅನಿವಾರ್ಯ ಸ್ಥಿತಿಯು ಬದಲಾಗಿ, ನನ್ನಲ್ಲಿಯೂ ನಿರ್ಧಾರಗಳನ್ನು ಕೇಳಿ ಬದುಕು ಬದಲಿಸಬಹುದಾದಂತಹ ದಿನಗಳು ಯಾವಾಗ ಬರುತ್ತೆ? ನಾನು ಹುಡುಗಿ ಅನ್ನುವ ಕಾರಣಕ್ಕೆ ಕನಿಕರ ತೋರಿಸುವುದನ್ನು ಬಿಟ್ಟು ನನ್ನ ಸಾಧನೆಗಳ ಬೆನ್ನ ಹಿಂದೆ ನಿಲ್ಲುವಂತಹ ದಿನಗಳು ಯಾವಾಗ ಬರುತ್ತೆ ? ಎಲ್ಲ ಪ್ರಶ್ನೆಗಳಲ್ಲಿಟ್ಟುಕೊಂಡು ದಿನಗಳನ್ನು ನೋಡುತ್ತಿದ್ದೇನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ