ಸ್ಟೇಟಸ್ ಕತೆಗಳು (ಭಾಗ ೮೭೫)- ಅರ್ಥ

ಸ್ಟೇಟಸ್ ಕತೆಗಳು (ಭಾಗ ೮೭೫)- ಅರ್ಥ

ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ  ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ, ಅವಳ ಎಲ್ಲ ಕೆಲಸದಲ್ಲೂ ಸಹಕಾರವನ್ನು ನೀಡುತ್ತಿದ್ದೇನೆ, ಅವಳಿಗೆ ಬೆನ್ನೆಲುಬಾಗಿ ಜೊತೆಗೆ ನಿಂತಿದ್ದೇನೆ. ಆದರೆ ಅವಳಿಗೆ ಇಂದಿನವರೆಗೂ ನನ್ನ ಪ್ರೀತಿಯ ಅರ್ಥನೇ ಆಗ್ಲಿಲ್ಲ ಅನ್ನೋದು ನನ್ನ ನೋವು". ಅವನ ಪಕ್ಕದಲ್ಲಿ ಕುಳಿತ ವೇದವ್ಯಾಸರು ಅವನ ಹೆಗಲ ಮೇಲೆ ಕೈ ಇಟ್ಟು," ನೋಡು ನಿನ್ನ ತರಗತಿಯಲ್ಲಿ ಪಾಠ ಮಾಡ್ತಾ ಇದ್ದಂತಹ ಶಿಕ್ಷಕರು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಿದ್ದರೂ ನಮಗೆ ಸರಿಯಾಗಿ ಅರ್ಥ ಆಗ್ತಾ ಇರಲಿಲ್ಲ, ಅದನ್ನ ಎರಡು ಮೂರು ಸಲ ಕೇಳಿ ಅರ್ಥ ಮಾಡಿಕೊಳ್ತಾ ಇದ್ದೆವು. ಅದಲ್ಲದೆ ಅವರು ನೇರವಾದ ಮಾತುಗಳಲ್ಲಿ ಅದನ್ನ ವಿವರಿಸುವುದಕ್ಕೆ ಪ್ರಯತ್ನಪಟ್ಟಿದ್ರು ಕೂಡ. ಹೀಗೆ ಅರ್ಥ ಮಾಡಿಕೊಂಡು ಬೆಳೆದ ನಮಗೆ ಒಂದು ವಿಷಯವನ್ನು ಹೇಳದೇ ಅರ್ಥ ಮಾಡಿಕೊಳ್ಳೋದು ಹೇಗೆ ಸಾಧ್ಯ? ಅದಕ್ಕೆ ನೀನು ಯಾವತ್ತಾದರೂ ನೀನು ಪ್ರೀತಿಸುತ್ತಿರುವವರ ಬಳಿ ಹೋಗಿ ನನಗೆ ನಿನ್ನ ಮೇಲೆ ಪ್ರೀತಿ ಮೂಡಿದೆ ಅನ್ನುವ ಮಾತನ್ನು ಒಂದು ಸಲವಾದರೂ ಹೇಳಿದ್ದೀಯಾ ? ಇಲ್ಲ ತಾನೇ. ನೀನು ಅವರಿಗೆ ಒಪ್ಪಿತವಾಗುವ ರೀತಿಯಲ್ಲಿ ಬದುಕಿದ್ದೀಯಾ ಅಂದ ಮಾತ್ರಕ್ಕೆ ನೀನು ಅವರನ್ನು ಪ್ರೀತಿಸುತ್ತಿದ್ದೀಯ ಎಂದು ಅವರು ಅರ್ಥ ಮಾಡಿಕೊಳ್ಳಬೇಕೆಂದಿಲ್ಲ. ಮೊದಲು ಅವರಿಗದನ್ನು ನೇರವಾಗಿ ಅರ್ಥ ಮಾಡಿಸು. ಅವರ ಒಪ್ಪಿಗೆ ಹೌದೋ ಇಲ್ವೋ ಅನ್ನೋದನ್ನ ತಿಳಿದುಕೋ. ಒಪ್ಪಿತವಾಗಿಲ್ಲದಿದ್ದರೆ ಅವರ ಜೊತೆಗೆ ಮೊದಲು ಹೇಗಿದ್ಯೋ ಆ ಬಾಂಧವ್ಯವನ್ನ ಹಾಗೆ ಮುಂದುವರಿಸು. ಒಪ್ಪಿತವಾದರೆ ನಿನ್ನ ಬದುಕಿನ ಹೊಸ ಕನಸಿನ ಕಡೆಗೆ ಸಾಗುವ ಯೋಚನೆಯನ್ನು ಮಾಡು .ಒಟ್ಟಿನಲ್ಲಿ ನಿನ್ನೆದುರು ಇರುವವರಿಗೆ  ನಿನ್ನ ಪ್ರೀತಿಯ ವಿಷಯಗಳನ್ನ ಅರ್ಥ ಪಡಿಸದೆ ಹೋದರೆ ಪ್ರಶ್ನೆಗಳೊಂದಿಗೆ ಜೀವನಪೂರ್ತಿ ಬದುಕುವಂಥ ಪರಿಸ್ಥಿತಿ ನಿನ್ನದಾಗಿ ಬಿಡುತ್ತದೆ. ಮೊದಲು ಅರ್ಥ ಮಾಡಿಸು, ಆಗ ಅರ್ಥ ಮಾಡಿಕೊಂಡು ನಿನ್ನ ಜೊತೆಗೆ ಬರಬಹುದು ಇಲ್ಲವಾದರೆ ಹೊಸ ಬದುಕಿನ ಅರ್ಥವನ್ನು ನೀನು ಹುಡುಕಿಕೊಳ್ಳಬಹುದು. ಅವನು ಗಟ್ಟಿ ನಿರ್ದಾರ ಮಾಡಿ ಹೊರಟು ಬಿಟ್ಟ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ