ಸ್ಟೇಟಸ್ ಕತೆಗಳು (ಭಾಗ ೮೮೦)- ಉತ್ತರ ಕೊಡಿ
ಹಾಗೆ ಮೌನವಾಗಿ ಕುಳಿತ ಆ ಮೂರು ಹುಡುಗರ ಕಣ್ಣಲ್ಲಿ ಕಣ್ಣೀರು ಇಳಿಯುತ್ತಾ ಇತ್ತು. ಮಾತು ಹೊರಗಡೆ ಬರುತ್ತಾನೇ ಇರಲಿಲ್ಲ. ಅವರಿಗೆ ನೋವಾಗಿದ್ದು ನೋಡುವಾಗಲೇ ಅನಿಸುತ್ತಿತ್ತು. ಆದರೆ ನೋವೇನು ಅನ್ನೋದು ಗೊತ್ತಾಗ್ಲೇ ಇಲ್ಲ. ಹಲವರು ಬಂದು ಅವರ ಬಳಿ ನಿಂತು ಮಾತನಾಡಿಸಿದರೂ ಸಹ ಯಾರೊಬ್ಬರ ಬಳಿಯೂ ಏನನ್ನೂ ಮಾತನಾಡದೇ ಮೌನವನ್ನೇ ಧರಿಸಿಕೊಂಡು ಕಣ್ಣೀರನ್ನು ಒರೆಸಿಕೊಂಡು ಅಲ್ಲಿಂದ ಹೊರಟು ಬಿಟ್ರು. ತಮಗೆ ಪ್ರತಿ ಸಲವೂ ನಾಟಕ ಹೇಳಿಕೊಡುತ್ತಿದ್ದವರ ಬಳಿ ಬಂದು ಸರ್ ನೀವು ಆಗಾಗ ಹೇಳ್ತಾ ಇದ್ದ ಮಾತು “ಪರಿಶ್ರಮ ಪಟ್ಟರೆ ಗೆಲುವು ಖಂಡಿತ, ಯಾರು ಹೆಚ್ಚು ಪರಿಶ್ರಮ ಮಾಡುತ್ತಾರೋ ಅವನು ಗೆಲುವನ್ನು ಪಡೆದುಕೊಳ್ಳುತ್ತಾನೆ.” ಇದೇ ಮಾತನ್ನು ನಂಬಿಕೊಂಡು ಇಷ್ಟು ವರ್ಷ ಬದುಕಿದ್ದವರು ನಾವು. ನಿನ್ನೆ ತಾನೇ ಭಾಗವಹಿಸಿದ ಸ್ಪರ್ಧೆಯಲ್ಲಿ ಅಷ್ಟು ಜನರಿಗಿಂತ ಹೆಚ್ಚು ಪರಿಶ್ರಮ ಪಟ್ಟವರು ನಾವು ಅನ್ನುವ ಗ್ಯಾರಂಟಿ. ನಮಗೆ ಅಂತಲ್ಲ ಬಂದ ಎಲ್ಲರಿಗೂ ಕೂಡ ನಮ್ಮಷ್ಟು ಪರಿಶ್ರಮ ಪಟ್ಟವರು ಯಾರೂ ಇಲ್ಲ ಅನ್ನೋದು ಗೊತ್ತಿತ್ತು. ಸ್ವತಃ ನಮ್ಮ ಹೊರತಾಗಿ ಬಹುಮಾನ ಪಡೆದುಕೊಂಡವರು ಕೂಡ ನಮ್ಮ ಕಡೆ ನೋಡಿ ಮೌನವಾಗಿ ಬಿಟ್ಟಿದ್ದರು. ಹೀಗೆ ಕಷ್ಟ ಪಟ್ಟದ್ದಕ್ಕೆ ಪ್ರತಿಫಲ ಸಿಗಬೇಕಾದ ವೇದಿಕೆಯಲ್ಲಿ ಗೌರವವೇ ಸಿಗದೇ ಹೋದರೆ, ನಾವು ಸ್ಪರ್ಧೆಯಲ್ಲಿ ಇಲ್ಲ ಅಂತಾದ್ರೆ ಇಷ್ಟು ದಿನ ಶ್ರಮ ವಹಿಸಿದ್ದಕ್ಕೆ ಏನು ಸಾರ್ಥಕ?.
ಪರಿಶ್ರಮಕ್ಕೆ ಗೆಲುವು ಸಿಗುತ್ತೆ ಅನ್ನುವ ನಿಮ್ಮ ಮಾತನ್ನು ನಾವು ಹೇಗೆ ಒಪ್ಪಿಕೊಳ್ಳುವುದು? ಮೋಸ ಅನ್ನೋದು ಮಾತನಾಡಿದಾಗ ಪ್ರಶ್ನಿಸುವುದಕ್ಕೆ ಅವಕಾಶವೇ ಇಲ್ಲದಾದಾಗ ಮೌನವಾಗಿದ್ದು ಕಣ್ಣೀರು ಸುರಿಸುವುದೇ ಒಳಿತಲ್ಲವೇ? ಇನ್ನು ಮುಂದೆ ಹೊಸ ಸ್ಪರ್ಧೆಗೆ ನಮ್ಮನ್ನು ಒಡ್ಡಿಕೊಳ್ಳುವಾಗ ಯೋಚಿಸಬೇಕಾದುದೇನು? ಮತ್ತೆ ಪರಿಶ್ರಮ ಪಡಬೇಕೋ? ಅಡ್ದದಾರಿ ಹಿಡಿಯಬೇಕೋ? ಉತ್ತರ ನೀವು ಕೊಡಬೇಕು ಸರ್, ಮೂವರ ಕೈಗಳನ್ನ ಹಿಡಿದು ಅವರನ್ನು ಬಾಚಿ ತಬ್ಬಿಕೊಂಡು ಗುರುಗಳು ಕಣ್ಣೀರಾಗಿ ಮೌನವಾಗಿ ಬಿಟ್ಟರು.. ಅವರ ಬಳಿಯೂ ಉತ್ತರ ಇರಲಿಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ