ಸ್ಟೇಟಸ್ ಕತೆಗಳು (ಭಾಗ ೮೯೨)- ಉರಿ

ಸ್ಟೇಟಸ್ ಕತೆಗಳು (ಭಾಗ ೮೯೨)- ಉರಿ

ಹೊಟ್ಟೆಯ ಒಳಗೆ ಬೆಂಕಿಯನ್ನು ಹಚ್ಚಿದವರಾರು? ನನ್ನ ಮನಸ್ಸಿನೊಳಗೆ ಸಣ್ಣ ಕಿಡಿಯನ್ನು ತಾಗಿಸಿಬಿಟ್ಟವರಾರು? ಗೊತ್ತಿಲ್ಲ ಮೊನ್ನೆಯಿಂದ ವಿಪರೀತವಾಗಿ ಉರಿಯುತ್ತಾ ಇದೆ. ನನ್ನ ಜೊತೆಗೆ ಓದಿದವರಿಗೆ ಅವರು ಮಾಡುವ ಕೆಲಸದಿಂದ ತಿಂಗಳಿಗೆ ನನಗಿಂತ ಹೆಚ್ಚು ಸಂಬಳ ಸಿಗುತ್ತಾ ಇದೆಯಂತೆ? ಇನ್ನೊಬ್ಬ ಕಾಲೇಜಿನಲ್ಲಿ ಅಷ್ಟೇನೂ ಚುರುಕಿರಲಿಲ್ಲ ಆದರೆ ಈಗ ನನಗಿಂತ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾನೆ. ಅವಳು ವೇದಿಕೆಗೆ ಬರುವುದಕ್ಕೆ ತುಂಬಾ ಹೆದರಿಕೊಳ್ಳುತ್ತಿದ್ದವಳು ಈಗ ಉತ್ತಮ ಮಾತುಗಾರ್ತಿಯಾಗಿದ್ದಾಳೆ ಒಂದಿಷ್ಟು ಕಡೆ ಸನ್ಮಾನವನ್ನು ಕೂಡ ಸ್ವೀಕರಿಸಿಕೊಂಡಿದ್ದಾಳೆ .ಕಾಲೇಜಿನಲ್ಲಿ ಪರಿಚಯ ಇಲ್ಲದೇ ಇದ್ದವರು ಇಂದು ವಿದೇಶಗಳಲ್ಲಿ ದೊಡ್ಡ ಕೆಲಸವನ್ನು ಸಂಪಾದಿಸಿದ್ದಾರೆ, ಅವನಿಗೆ ಸಿಗುತ್ತಿರುವ ಸಂಬಳ ಎಷ್ಟು ಅಂತ ಗೊತ್ತಿಲ್ಲ ಆದರೆ ಮನೆ ಕಟ್ಟಿದ್ದಾನೆ ಕಾರು ತೆಗೆದುಕೊಂಡಿದ್ದಾನೆ ಪ್ರತಿದಿನವೂ ಸಂಭ್ರಮವನ್ನು ಅನುಭವಿಸುತ್ತಿದ್ದಾನೆ. ಇಷ್ಟೆಲ್ಲಾ ಅವರಿಗೆ ಸಾಧ್ಯವಾಗುತ್ತಿರುವುದು ನನಗೆ ಯಾಕೆ ಆಗ್ತಾ ಇಲ್ಲ? ಹಾಗಾಗಿ ಒಂಥರಾ ಚಡಪಡಿಕೆ ಆರಂಭವಾಗಿದೆ. ಅದು ಹೊಟ್ಟೆ ಒಳಗಿನ ಬೆಂಕಿಯೋ ಮನಸಿನೊಳಗಿನ ಕಿಡಿಯೋ ಗೊತ್ತಾಗುತ್ತಿಲ್ಲ. ಈ ಕಿಡಿಯಿಂದ ನಾನು ಸುಟ್ಟು ಹೋಗುತ್ತೇನೋ ಅಥವಾ ನನ್ನ ಆಲೋಚನೆಗಳು ಸುಟ್ಟು ಹೋಗುತ್ತವೋ ಗೊತ್ತಿಲ್ಲ. ಹಾಗೆ ಬೆಳಗ್ಗೆ ಸುಮ್ಮನೆ ಪ್ರಶ್ನೆಗಳನ್ನ ಹೊತ್ತು ಮೌನವಾಗಿ ಬಿಟ್ಟಿದ್ದೇನೆ....ಉತ್ತರದ ನಿರೀಕ್ಷೆಯಲ್ಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ