ಸ್ಟೇಟಸ್ ಕತೆಗಳು (ಭಾಗ ೮) - ಎರಡು ಘಟನೆ

ಸ್ಟೇಟಸ್ ಕತೆಗಳು (ಭಾಗ ೮) - ಎರಡು ಘಟನೆ

ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ  ದೃಷ್ಟಿ ಹರಿಸಿದೆ. ಬಯಸಿದ್ದೇನೂ ಕಂಡುಬರಲಿಲ್ಲ. ಅಲ್ಲೇ ಬದಿಗೊಂದು ದೊಡ್ಡ ಗಾಡಿ. ಬೆಲೆ ಅದರದ್ದು ವಿಪರೀತ ಇರಬಹುದು. ಪಕ್ಕದ  ಬೀದಿದೀಪ ತಾನುರಿದು ಬೆಳಕ ಸುರಿಸುತಿದೆ ಗಾಡಿಯ ಮೇಲೆ. ಗಾಡಿಯೊಳಗೆ ಆಸೀನರಾದ ಯುವಮನಸ್ಸುಗಳ ಮುಖಭಾವದಲ್ಲಿ ಸಿಟ್ಟು ಹೆಚ್ಚಿತ್ತು . ಕಿಟಕಿ ಏರಿಸಿದ್ದರು ಕೈ ಕೈ ಮೇಲಾಟದೊಂದಿಗೆ ಜಗಳದ ಸದ್ದು ರಸ್ತೆಗೂ ಕೇಳಿಸುತ್ತಿತ್ತು. ಬಾಗಿಲು ನೂಕಿ ಹೊರಬಂದ ಆಕೆ ರಿಕ್ಷಾ ಏರಿ ಹೊರಟಳು. ಆತ ಸಿಟ್ಟಿನಲ್ಲಿ ಇನ್ನಾರಿಗೂ ಫೋನಾಯಿಸಿ ದಭಾಯಿಸಿದ. ಅಲ್ಲೇ ಪಕ್ಕದಲ್ಲಿ ದೀಪದ ಕಂಬದ ಕೆಳಗೆ ಹಿರಿ ಜೀವಗಳೆರಡರ ಬಟ್ಟೆ ಕೊಳೆ ಆಗಿತ್ತು. ಕರ್ಮ ಜೀವಿಗಳ ದಣಿವು ಹಣೆಯಲ್ಲಿ ಕಂಡರೂ ಮುಖದಲ್ಲಿ ನಗುವಿತ್ತು. ಅವಳ ಕೈ ಹಿಡಿದು ನಿಧಾನವಾಗಿ ಬಸ್ ನಿಲ್ದಾಣದ ಒಳಗೆ ಬಂದು ಕುಳ್ಳಿರಿಸಿ ನೀರು ನೀಡಿದ. ವಿಶ್ರಾಂತಿ ಪಡೆದು ಬರಿಯ ಪಾದವೂರಿ ಹೆಜ್ಜೆ ಹಾಕಿದರು. ಸಾಗಿದ ಕಡೆ ಬೆಳಕಿರಲಿಲ್ಲವಾದರೂ ಚಂದಿರ ತಂಪಿನ ಕಿರಣವ ಹರಿಸಿದ. "ಯಾರ್ರೀ‌ ಉಜಿರೆ " ಕಂಡೆಕ್ಟರ್ ಕೂಗಿದ.

-ಧೀರಜ್ ಬೆಳ್ಳಾರೆ 

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ಕೃಪೆ