ಸ್ಟೇಟಸ್ ಕತೆಗಳು (ಭಾಗ ೯೧೪)- ಯೋಚನೆ
ಪ್ರಾಣಿ ಪಕ್ಷಿಗಳೆಲ್ಲ ಅವತ್ತು ಸಭೆ ಕರೆದಿದ್ದವು. ಬೇಸಿಗೆಕಾಲದ ತೀವ್ರತೆ ಆರಂಭವಾಗಿದೆ. ಆ ಕಾರ್ಯಕ್ರಮಕ್ಕೆ ಮುಖ್ಯ ಉಸ್ತುವಾರಿ ಅಂತ ಯಾರೂ ಇಲ್ಲ. ಸೇರಿದವರೆಲ್ಲರೂ ಕೂಡ ತಮ್ಮ ಒಳಿತಿಗೆ ಮುಂದಿನ ಬದುಕಿಗೆ ಬೇಕಾದ ದಾರಿಯನ್ನು ನಿರ್ಧರಿಸಿಕೊಳ್ಳುವುದಕ್ಕೆ ಅಲ್ಲಿ ಸೇರಿದ್ರು. ಬದುಕುವುದಕ್ಕೆ ಸಮಸ್ಯೆ ಆಗ್ತಾ ಇದೆ, ಹೀಗೆ ಕಾಲ ಮುಂದುವರಿಯುತ್ತಾ ಹೋದರೆ ಕುಡಿಯುವುದಕ್ಕೆ ನೀರಿಲ್ಲದೆ ವಾಸಿಸುವುದಕ್ಕೆ ಸ್ಥಳವಿಲ್ಲದೆ ಬದುಕುವ ಆಯಸ್ಸು ಕಡಿಮೆಯಾಗುತ್ತಾ ಕನಸುಗಳಿಲ್ಲದೆ ಸಾಯುದನ್ನೇ ಎದುರು ನೋಡುವ ದಿನಗಳು ಮುಂದೆ ಬರಲಿದೆ ಎನ್ನುವುದೇ ಅವರ ಯೋಚನೆ. ಯಾವುದೇ ಸ್ಥಳದಲ್ಲಿ ಹುಡುಕಿದರೂ ನೀರಿನ ಆವಾಸವೇ ಸಿಗುತ್ತಾ ಇಲ್ಲ .ಮಳೆ ಬಂದಾಗ ಸಂಭ್ರಮ ಪಡುತ್ತೇವೆ ಆದರೆ ಅದನ್ನ ಉಳಿಸಿಕೊಳ್ಳುವುದಕ್ಕೆ ನಾವೆಷ್ಟೇ ಪ್ರಯತ್ನ ಪಟ್ಟರೂ ಈ ಮನುಷ್ಯರು ಬಿಡ್ತಾ ಇಲ್ಲ. ಅವರಿಗೆ ಅಭಿವೃದ್ಧಿ ಆಗ್ಬೇಕು ಅದ್ಬುತವಾದದ್ದೇನು ಸಾಧಿಸಬೇಕು ಅನ್ನುವ ಕಾರಣಕ್ಕೆ ನೀರು ಉಳಿಸುವುದನ್ನ ಬಿಟ್ಟು ಕಟ್ಟಡಗಳನ್ನಷ್ಟೇ ಏರಿಸುತ್ತಿದ್ದಾರೆ. ನೀರಿಗೆ ಇಂಗುವುದಕ್ಕೆ ಜಾಗ ಸಿಗುತ್ತಿಲ್ಲ. ಮನುಷ್ಯರೊಂದಿಗೆ ನಾವು ಒಟ್ಟಾಗಿ ಬದುಕುವುದಕ್ಕೆ ಸಾಧ್ಯವಿಲ್ಲವೇನೋ? ಇದಕ್ಕೆ ತೀರ್ಮಾನ ಏನು ಅನ್ನೋದು ನಮಗಂತೂ ಗೊತ್ತಾಗ್ತಾ ಇಲ್ಲ. ಬದುಕು ತುಂಬಾ ಕಷ್ಟವಾಗಿದೆ, ಮುಂದಿನ ಬಾರಿ ಸೇರುವಾಗ ಇವುಗಳಿಗೊಂದು ಪರಿಹಾರವನ್ನ ನಾವು ಕಂಡುಕೊಳ್ಳಬೇಕು. ಯಾಕೆಂದರೆ ನಮ್ಮ ಮಕ್ಕಳ ಭವಿಷ್ಯದ ಯೋಚನೆಯ ಜವಾಬ್ದಾರಿ ನಮ್ಮದಲ್ಲವೇ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ