ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ

ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ

ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವಂತ ಮನದ ನಿವಾಸಗಳನ್ನ ಹುಡುಕಿ ಆಶ್ರಯವನ್ನು ಪಡೆದಿದ್ದ. ಆಶ್ರಯವನ್ನು ಪಡೆದದ್ದೇನು ನಿಜ ಆದ್ರೆ ಆತ ಯಾವುದೇ ಕೆಲಸವನ್ನು ಕೈಹಿಡಿದು ನಡೆಸುವಂತಿರಲಿಲ್ಲ. ಬರಿಯ ಸೂಚನೆಗಳನ್ನಷ್ಟೇ ನೀಡಬಹುದಿತ್ತು. ಎದೆಯ ಕವಾಟದೊಳಗೆ ಕುಳಿತು ಮನಸ್ಸುಗಳ ಸುತ್ತ ಚಲಿಸುವ ತರಂಗಗಳಿಗೆ ಸುದ್ದಿಗಳನ್ನು ರವಾನಿಸುತ್ತಿದ್ದ. ಇದು ಸರಿ , ಇದು ತಪ್ಪು ಈ ದಾರಿಯಲ್ಲಿ ಸಾಗು ಒಳಿತಾಗುತ್ತದೆ, ಬದುಕು ಸುಂದರ ಹೀಗೆ ಅದ್ಭುತವಾದ ಸಂದೇಶಗಳನ್ನೇ ನೀಡುತ್ತಾ ಇದ್ದ. ಆದರೆ ಹೃದಯದ ಕಮಾಟವನ್ನು ಹೊಂದಿರುವ ಮನುಷ್ಯ ಇದ್ದಾನಲ್ಲ ಆತನಿಗೆ ಅದನ್ನೆಲ್ಲ ಕೇಳುವ ತಾಳ್ಮೆ ಎಲ್ಲಿದೆ. ಕೆಲಸಗಳನ್ನು ನಿರ್ವಹಿಸುವುದಕ್ಕೆ ನೀಡಿದ ಸೂಚನೆಗಳನ್ನ  ಯಾವುದನ್ನು ಪಾಲಿಸದೆ ಇರುವುದನ್ನು ಕಂಡಾಗ ಭಗವಂತನಿಗೂ ಒಳಗೆ ಕುಳಿತು ಪ್ರಯೋಜನವೇನು? ಇನ್ನು ಮಾತು ಕೇಳುವ ಹಲವು ಮನಗಳು ಮುಂದಿದ್ದಾಗ ಅವುಗಳ ಜೊತೆಗೆ ಒಳ ಸೇರಿ ಇನ್ನೊಂದಷ್ಟು ಹೆಚ್ಚು ಶಕ್ತಿ ತುಂಬೋಣ ಅನ್ನುವ ಕಾರಣಕ್ಕೆ ಹೊರಟೆ ಬಿಟ್ಟ. ದಾರಿ ತಪ್ಪಿ ಈಗಲೂ ಆ ಮನುಷ್ಯ ಅಲೆದಾಡುತ್ತಿದ್ದಾನೆ ಎತ್ತ ಸಾಗಬೇಕು ಅಂತ ತಿಳಿಯದೆ. ಅದಕ್ಕೆ ಭಗವಂತ ಸೂಚನೆಗಳನ್ನು ಒಳಗೆ ನೀಡುವಾಗ ಕೇಳಿ ಮುನ್ನಡೆಯಬೇಕು, ಹಾಗಾದರೆ ಅವನು ನಮ್ಮೊಳಗೆ ಕುಳಿತು ಸರಿಯಾದ ದಾರಿಯ ಕಡೆಗೆ ಖಂಡಿತ ನಡೆಸುತ್ತಾನೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ