ಸ್ಟೇಟಸ್ ಕತೆಗಳು (ಭಾಗ ೯೧) - ಬದುಕು

ಸ್ಟೇಟಸ್ ಕತೆಗಳು (ಭಾಗ ೯೧) - ಬದುಕು

ಹೊತ್ತು ತಿರುಗುತ್ತಾನೆ! ಬೆಂಕಿಯಲ್ಲಿ ಇಟ್ಟ ಪಾತ್ರೆಯೊಳಗೆ ಅನ್ನ ಬೇಯಬೇಕಾದರೆ ಹೊತ್ತು ತಿರುಗಲೇಬೇಕು. ಸಂತೆಯೊಳಗೆ ನಿಲ್ಲಬೇಕು. ಜನರಿದ್ದಲ್ಲಿಗೆ ನಡೆಯಬೇಕು. ಇವನಿಲ್ಲದಿರೆ ಬೀಡಿ ಕಟ್ಟುವ ಎಲೆ ಕತ್ತರಿಸುವ ಕತ್ತರಿ ಹರಿತಗೊಳ್ಳೋದಿಲ್ಲ. ಅಡುಗೆ ಮನೆಯ ಚೂರಿ ಚೂಪಾಗೋದಿಲ್ಲ. ಕತ್ತರಿ ಹಿಡಿದಾಗ ಮಿಂಚುವ ಬೆಂಕಿಯ ಕಿಡಿಗಳು ನಮ್ಮೊಳಗೆ ಸಂಭ್ರಮ 

ಸೃಷ್ಟಿಸಿದರೂ ಆ ಸಂಭ್ರಮ ಅವನಿಗೆ ದಾಟಲೇ ಇಲ್ಲ. ಅನ್ನವನ್ನರಸಲು ಆತ ಕೆಲಸ ಬೇರೆ ಹುಡುಕುತ್ತಿಲ್ಲವೋ ಅಥವಾ ಇದನ್ನ ಬಿಡೋಕಾಗ್ತಿಲ್ಲವೋ ಗೊತ್ತಿಲ್ಲ. ಇನ್ನೂ ಬದುಕಿನ ನೊಗ ಹೊತ್ತಂತೆ ಚಕ್ರದ ಗಾಡಿಯ ಹೆಗಲೇರಿಸಿ ಇನ್ನೆಲ್ಲೂ ಕಿಡಿ ಹಾರಿಸಿ ಹರಿತಗೊಳಿಸುವವರ ಬೇಡುತ್ತಿದ್ದಾನೆ. ಕಣ್ಣುಗಳು ಬೆಳಕು ಕಳೆದುಕೊಂಡಿದೆ ಆದರೆ ನಂಬಿಕೆಯನ್ನಲ್ಲ. ಅಲ್ಲಲ್ಲಿ ಸಣ್ಣಪುಟ್ಟ ಕಿಡಿಗಳು ಚಿಮ್ಮುತ್ತಿದ್ದಾವೆ? ಅರಸುತ್ತಲೇ ಇದ್ದಾನೆ...  ಬದುಕುವ ಮನಸುಗಳನ್ನು ...... ಸಿಡಿಯುವ ಕಿಡಿಗಳನ್ನ....

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ