ಸ್ಟೇಟಸ್ ಕತೆಗಳು (ಭಾಗ ೯೩೦)- ವಿಭಾಗ

ಸ್ಟೇಟಸ್ ಕತೆಗಳು (ಭಾಗ ೯೩೦)- ವಿಭಾಗ

ಸರಕಾರಕ್ಕೆ ಒಂದು ಪತ್ರ ಹೋಗಿತ್ತು. ಸರಕಾರ ಪತ್ರವನ್ನ ಬಹಳ ತೀವ್ರವಾಗಿ ಪರಿಗಣಿಸಿ ಒಂದು ಹಾಸ್ಟೆಲ್ ಕಟ್ಟುವುದು ಎಂದು ತೀರ್ಮಾನ ಆಯಿತು. ಆದರೆ ಅಲ್ಲೊಂದು ಪ್ರಶ್ನೆ ಇದೆ. ಹಾಸ್ಟೆಲ್ ಕಟ್ಟುವಾಗ ಒಂದೊಂಡು ಜಾತಿಯವರಿಗೆ ಒಂದೊಂದು ಅವಶ್ಯಕತೆ ಅವರವರ ಸಮಾಜವನ್ನು ಕಟ್ಟಿ ನಿಲ್ಲಿಸಬೇಕು ಅನ್ನುವ ಕಾರಣಕ್ಕೆ ಒಬ್ಬೊಬ್ಬರದು ಒಂದೊಂದು ರೀತಿಯ ಶರತ್ತುಗಳು ಅವೆಲ್ಲವನ್ನು ಒಂದೇ ಹಾಸ್ಟೆಲ್ ನಲ್ಲಿ ಕಟ್ಟುವುದಕ್ಕೆ ಸಾಧ್ಯವಿಲ್ಲ ಅಂದುಕೊಂಡು ಆ ಊರಿನ ಬೇರೆ ಬೇರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೇರೆ ಬೇರೆ ಜಾತುಗಳ ಹಾಸ್ಟೆಲ್ ಗಳಿಗೆ ಸೇರಿಬಿಟ್ರು. ಅಲ್ಲಿ ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ನೋಡಿಕೊಳ್ಳುವುದಕ್ಕೆ ಅಂತ ಪ್ರತೀ ಹಾಸ್ಟೆಲಿಗೂ ಒಬ್ಬ ವಾರ್ಡನನ್ನ ನೇಮಿಸಲಾಗಿತ್ತು. ರಾತ್ರಿ ಮಲಗಿದ ಮಕ್ಕಳು ಮತ್ತೆ ಬೆಳಗಾದರೆ ತಿಂಡಿ ತಿಂದುಕೊಂಡು ಅವರವರ ಕಾಲೇಜಿನ ಶಾಲೆಗಳಿಗೆ ಜೊತೆಯಾಗಿ ಹೋಗ್ತಾಯಿದ್ರು. ಅಲ್ಲಿಂದ ತಿರುಗಿ ಬಂದ ನಂತರ ಒಂದೇ ಮೈದಾನದಲ್ಲಿ ಜೊತೆಯಾಗಿ ಆಟವನ್ನು ಆಡುತ್ತಾ ಇದ್ದರು. ಆಹಾರದ ಕ್ರಮಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ವ್ಯವಸ್ಥೆಗಳಲ್ಲಿ ಬದಲಾವಣೆ ಇರಲಿಲ್ಲ. ಎಲ್ಲಾ ಹಾಸ್ಟೆಲ್ ಒಳಗೆ ಅವರ ಪ್ರವೇಶ ಸುಲಭವಾಗಿತ್ತು. ಮಕ್ಕಳ ಮನಸ್ಸು ನಿರ್ಮಲವಾಗಿತ್ತು. ಸರಕಾರ ಕಟ್ಟಿದ ಕಂಪೌಂಡ್ ಗಟ್ಟಿಯಾಗಿ ಅವರನ್ನು ವಿಭಾಗ ಮಾಡಿದ್ದರು. ಸಹ ಮಕ್ಕಳಿಗೆ ಆ ಕಂಪೌಂಡನ್ನು ಹಾರಿ ಹೋಗುವುದು ಅಭ್ಯಾಸವಾಗಿ ಹೋಗಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ