ಸ್ಟೇಟಸ್ ಕತೆಗಳು (ಭಾಗ ೯೩೮)- ಬಿತ್ತೋಣ
ಅವತ್ತು ಅಜ್ಜನ ಉಪದೇಶ ನಡೆದಿತ್ತು. ಜಗತ್ತಿನಲ್ಲಿ ಪ್ರತಿಯೊಂದು ಬೆಳೆಯುತ್ತದೆ. ಯಾವುದನ್ನು ಎಲ್ಲಿ ಯಾವ ಕ್ಷಣದಲ್ಲಿ ಹೇಗೆ ಬೆಳೆಸುತ್ತೇವೆ ಅನ್ನೋದರ ಮೇಲೆ ಅದರ ಭವಿಷ್ಯ ಅವಲಂಬಿಸಿರುತ್ತದೆ. ಫಲವತ್ತಾದ ನೆಲದಲ್ಲಿ ಬಿತ್ತಿದ ಬೀಜಕ್ಕೆ ಒಂದಷ್ಟು ನೀರು ಗೊಬ್ಬರಗಳನ್ನ ಹಾಕಿದ್ರೆ ದೊಡ್ಡಮರವಾಗಿ ಫಲ ಕೊಡುವುದು ಖಂಡಿತ. ಜೀವನದ ದಾರಿಗೋಸ್ಕರ ಮನಸ್ಸಿನೊಳಗೆ ಯೋಜನೆಗಳ ಬಿತ್ತಿ ಅಂತರ್ಯದಲ್ಲಿ ಅದಕ್ಕೊಂದು ಮೂರ್ತ ರೂಪವನ್ನು ನೀಡಿದರೆ ಬದುಕಿನ ದಾರಿಗೆ ಅದೇ ಬೆಳಕಾಗುತ್ತದೆ. ಆದರೆ ಸದ್ಯಕ್ಕೆ ಈಗ ಆಗ್ತಾ ಇರೋದು ಏನು ಗೊತ್ತಾ? ಸುತ್ತಮುತ್ತ ಬಿದ್ದಿರುವಂತಹ ಹಲವಾರು ಸಮಸ್ಯೆಗಳು ನೋವುಗಳು ಕೆಟ್ಟ ಯೋಚನೆಗಳೆನ್ನುವ ಬೀಜಗಳನ್ನ ಅಲ್ಲೇ ಒಣಗಲು ಬಿಡುವುದನ್ನ ಬಿಟ್ಟು ಮನಸ್ಸಿನೊಳಕ್ಕೆ ತಂದು ಅದಕ್ಕೊಂದಿಷ್ಟು ನೀರು ಗೊಬ್ಬರಗಳನ್ನ ಹಾಕಿ ಬೆಳೆಸುವುದಕ್ಕೆ ಆರಂಭ ಮಾಡುತ್ತೇವೆ.ಹಾಗೆ ಬೆಳೆದದ್ದು ಒಳಗೆ ಹರಡಿಕೊಂಡು ಹೊಸ ಆಲೋಚನೆಗಳನ್ನ ಹುಟ್ಟುವುದಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಅದರಿಂದಾಗಿ ಒಂದಷ್ಟು ಸಮಸ್ಯೆಗಳು ಪರಿಹಾರ ಇಲ್ಲದೆ ನಾವು ಅನಗತ್ಯವಾಗಿ ಪರದಾಡುತ್ತಿರುತ್ತೇವೆ. ನಾವು ಹೊರಗೆ ಬಿತ್ತಿದಂತಹ ಸಮಸ್ಯೆಗಳನ್ನ ಮನಸ್ಸಿನೊಳಗೆ ತಂದು ಬೆಳೆಸಲಾರಂಬಿಸಿದರೆ ತೊಂದರೆ ನಮಗೆ ತಾನೇ. ಅದಕ್ಕಾಗಿ ಒಳಗೆ ಅಗತ್ಯವಾಗಿರುವುದನ್ನು ಮಾತ್ರ ಬೆಳೆಸಿ ವ್ಯರ್ಥವಾದದನ್ನ ಅಲ್ಲೇ ಬಿಟ್ಟುಬಿಡುವುದು ಒಳಿತು. ಇದು ನಿನಗೆ ತಲೆಗೆ ಹೋಗಲಿಕ್ಕೆ ಇಲ್ಲ. ಒಂದಷ್ಟು ಸಮಯವಾದ ಮೇಲೆ ಇದನ್ನು ಖಂಡಿತವಾಗಿ ಯೋಚಿಸುತ್ತೀಯಾ ಅಂತಂದು ಅಜ್ಜ ಹೋದರು. ಅವರು ಬಿತ್ತಿದ ಆಲೋಚನೆ ನನ್ನ ಮನಸ್ಸಿನೊಳಗೆ ಈಗ ಗಟ್ಟಿ ಮರವಾಗಿ ನಿಂತಿದೆ. ನಾನೀಗ ಪ್ರತಿಯೊಂದು ಆಲೋಚಿಸಿ ಎಲ್ಲಿ ಯಾವುದನ್ನು ಬೆಳೆಸಬೇಕು ಅಂತ ನಿರ್ಧಾರ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ