ಸ್ಟೇಟಸ್ ಕತೆಗಳು (ಭಾಗ ೯೫೮)- ಚಪ್ಪರ

ಸ್ಟೇಟಸ್ ಕತೆಗಳು (ಭಾಗ ೯೫೮)- ಚಪ್ಪರ

ಮನೆಯಂಗಳದಲ್ಲಿ ಚಪ್ಪರವೊಂದನ್ನ ಹಾಕುವಾಗಲೇ ಕೆಟ್ಟ ಸೂಚನೆಗಳು ಮೂಡಲಾರಂಭಿಸಿದವು. ಮನೆಯವರಿಗೆ ಒಂದು ತರಹದ ಕಳವಳ. ಆದರು ದೇವರ ಮೇಲೆ ಭಾರ ಹಾಕಿ ಮನೆಯ ಮದುವೆಗೆ ಸಂಭ್ರಮದಿಂದ ಕೆಲಸ ಕೈಗೆತ್ತಿಕೊಂಡು ಎಲ್ಲರೂ ಸಹಕಾರದಿಂದ ಅಂಗಳದ ತುಂಬೆಲ್ಲ ಗಟ್ಟಿ ಚಪ್ಪರ ಒಂದು ನಿಂತು ಸಂಭ್ರಮದ ರಥಯಾತ್ರೆಗೆ ಅಣಿಯಾಯಿತು. ಬಂದ ಸರ್ವರೂ ಕಾರ್ಯಕ್ರಮದಲ್ಲಿ ಜೊತೆಯಾದರು. ಸಂಭ್ರಮವನ್ನು ಹಂಚಿಕೊಂಡರು. ಕುಟುಂಬ ಒಂದು ದೊಡ್ಡದಾಗುವ ಸೂಚನೆಯನ್ನು ನೀಡಿತು. ಹೊಸ ಮನೆಯ ಮಗಳೊಬ್ಬಳು ಈ ಮನೆಗೆ ಪಾದ ಬೆಳೆಸಿ ಮನೆಯ ದೀಪ ಬೆಳಗಿದಳು. ಪ್ರತಿದಿನವೂ ನಗುತ್ತಿದ್ದ ಕುಟುಂಬಕ್ಕೆ ಇನ್ನೊಂದಷ್ಟು ಸಂಭ್ರಮದ ಕಳೆ ಹೆಚ್ಚಾಗಿತ್ತು. ಬಂದಿದ್ದ ನೆಂಟರು ಖುಷಿಯನ್ನ ಹಂಚಿ ಅವರವರ ಮನೆಗೆ ಹೊರಟುಹೋದರು. ದಿನವೂ ಸಂಜೆಯ ಹೊತ್ತು ಕುಶಲೋಪರಿ ಮಾತನಾಡುತ್ತಾ ಹೊಸ ಹೊಸ ಕಥೆಗಳೊಂದಿಗೆ ಬದುಕಲಾರಂಬಿಸಿದರು. ಆ ದಿನ ಮಳೆ ಬರುವ ಸೂಚನೆ, ಅಂಗಳದಲ್ಲಿ ಹರಡಿದ್ದ ಅಡಿಕೆಗಳನ್ನ ರಾಶಿ ಮಾಡುವ ತವಕದಲ್ಲಿ ಮನೆಯ ಮದುಮಗ ಕೆಲಸಕ್ಕೆ ಇಳಿದುಬಿಟ್ಟಿದ್ದ . ದೇವರಿಗೆ ಯಾರ ಮೇಲಿನ ಕೋಪವೋ ಏನೋ ಸಿಡಿಲೊಂದು ನೇರವಾಗಿ ಆತನ ಮೇಲೆ ಬಡಿದು ಆತನ ಪ್ರಾಣ ಪಕ್ಷಿಯನ್ನು ಹಾಗೆಯೇ ಕರೆದೊಯ್ದು  ಬಿಟ್ಟಿತು. ಮನೆಯೊಳಗಿನವರು ಹಾಗೆಯೇ ನಿಂತು ಬಿಟ್ಟರು. ಎಷ್ಟೇ ಬೇಡಿಕೊಂಡರೂ ಪ್ರಾಣ ಮತ್ತೆ ಬರಲಿಲ್ಲ. ಮದುವೆಗೆ ಹಾಕಿದ ಚಪ್ಪರವು ಮಸಣದ ಕಾರ್ಯಕ್ಕೂ ಹಾಗೆಯೇ ನಿಂತುಬಿಟ್ಟಿದ್ದು ವಿಪರ್ಯಾಸ. ನೆಂಟರಿಷ್ಟರು ಮನೆ ತಲುಪಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಮನೆ ಕಡೆಗೆ ಓಡಿ ಬರುವ ಪರಿಸ್ಥಿತಿ ನಿರ್ಮಾಣ ಆಯಿತು. ಪ್ರೀತಿಯನ್ನು ನಂಬಿದವಳಿಗೆ ಜೀವನಪೂರ್ತಿ ನರಕವೊಂದು ಪ್ರಾಪ್ತಿಯಾಯಿತು. ಭಗವಂತನ ಕೆಲವೊಂದು ಕೆಲಸಗಳು ತುಂಬಾ ಬೇಸರ ಹುಟ್ಟಿಸುತ್ತದೆ.. ಭಯವನ್ನೂ ಸಹ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ