ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು ಆಶ್ಚರ್ಯ ಪಟ್ಟರೆ, ಕೆಲವರು ನೋವು ಪಡ್ತಾರೆ. ನಾವು ಎಲ್ಲರಿಗೂ ಒಂದೇ ತೆರನಾಗಿರುವುದಿಲ್ಲ. ಕೆಲವರಿಗೆ ಸಾಕು ಅನ್ನಿಸಿದ್ರೆ, ಕೆಲವರಿಗೆ ಬೇಕು ಅನ್ಸುತ್ತೆ. ಹಾಗಾಗಿ ಇವತ್ತು ನಮ್ಮನ್ನ ಯಾರೇ ಏನೇ ಅಂದ್ರು ನಾವ್ಯಾರು ಕೂಡ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಯಾಕೆಂದರೆ ಇವತ್ತು ಅದನ್ನು ಪಡೆದುಕೊಂಡ ಯಾರಿಗೂ ಗೊತ್ತಿಲ್ಲ, ನಾವು ಅವರ ಜೀವನವನ್ನು ಬದಲಿಸುವುದಿಲ್ಲ ಅಂತ .ನಾವು ಅವರು ಪಟ್ಟ ಪರಿಶ್ರಮಕ್ಕೆ ದೊರಕಿದ್ದೇವೆ. ಇದು ಅವರ ಮುಂದಿನ ಒಂದೆರಡು ಹೆಜ್ಜೆಗಳಿಗೆ ಗಟ್ಟಿಯಾಗಿ ಸ್ಪೂರ್ತಿಯಾಗಬಹುದು ಹೊರತು ಇವರ ಜೀವನವನ್ನು ನಾವು ನಿರ್ಧರಿಸುವವರಲ್ಲ ಅನ್ನೋದು ಇವರ ಅರಿವಿಗೆ ಬರ್ತಾ ಇಲ್ಲ. ಅದಲ್ಲದೆ ಆ ಮಕ್ಕಳ ಹೆತ್ತವರಿದ್ದಾರಲ್ಲ ಅವರಿಗಾದರೂ ಅದರ ಅರಿವು ಬಂದರೆ ಒಳ್ಳೆಯದು. ಕೆಲವರಿಗೆ ನಾವು ಕಡಿಮೆ ಸಿಕ್ಕ ಕಾರಣ ತುಂಬಾ ನೋವಿನಲ್ಲಿರಬಹುದು, ಜೀವನವೇ ಹೋಯ್ತು ಎನ್ನುವ ಕಾರಣಕ್ಕೆ ಸಾವನ್ನು ಹತ್ತಿರ ಕರೆದುಕೊಳ್ಳಬಹುದು, ಆದರೆ ನಾವು ಅವರನ್ನು ಎಚ್ಚರಿಸಬೇಕಾಗಿದೆ. ಈ ಪಡೆದುಕೊಂಡ ಅಂಕ ಮೂರು ಗಂಟೆಯ ಪರೀಕ್ಷೆಯಿಂದ ದೊರಕಿದ್ದು, ನಿನ್ನ ಜೀವನದ ಇಷ್ಟು ದಿನದ ಅವಧಿಯ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಅದಲ್ಲ, ಅದಲ್ಲದೆ ಮುಂದೆ ಅದ್ಬುತವಾದ ಜೀವನ ನಿನ್ನ ಮುಂದೆ ಇದೆ, ನಾವು ನಿನಗೆ ಒಂದಷ್ಟು ಸಮಯದವರೆಗೆ ನೆನಪಿರುತ್ತೇವೆ ,ಹೊರತು ಜೀವನದ ದೊಡ್ಡ ದೊಡ್ಡ ಗುರಿಗಳನ್ನು ತಲುಪಿದಾಗ ನಾನು ನಿನಗೆ ಮರತೆ ಹೋಗಿರುತ್ತೇನೆ. ಇದನ್ನ ನಾವೆಲ್ಲರೂ ಎಚ್ಚರಿಸಬೇಕಾಗಿದೆ. ಹಾಗಾಗಿ ಇಂದು ನಮ್ಮ ದಿನ ಆಗಿದೆ. ಅದು ಆ ಮಕ್ಕಳ ದಿನವಾಗಬೇಕು. ನಾವು ಬರಿಯ ಅವರ ಪರೀಕ್ಷೆಗೆ ದೊರಕಿದ ಪ್ರತಿಫಲವಷ್ಟೇ ಹೊರತು ಅವರ ಬದುಕಿನ ಪರೀಕ್ಷೆಯ ಪ್ರತಿಫಲವಲ್ಲ ಅನ್ನುವುದನ್ನ ತಿಳಿಸಬೇಕು...ಸಭೆ ಮುಕ್ತಾಯವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ